ಬೆಂಗಳೂರು: ಪ್ರವಾಹ ಭೀತಿ, ಗುಡ್ಡ ಕುಸಿತದ ಆತಂಕದಲ್ಲಿರುವ ರಾಜ್ಯದ ಜನರಿಗೆ ಇನ್ನೂ 5 ದಿನಗಳ ಕಾಲ ವರುಣ ಮತ್ತೆ ತನ್ನ ಅಬ್ಬರ ತೋರಲಿದ್ದಾನೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡುಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ ಉತ್ತರ ಕನ್ನಡ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಅದಷ್ಟು ಸುರಕ್ಷಿತ ಪ್ರದೇಶದಲ್ಲಿ ಇರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನು, ಬೆಳಗಾವಿ, ಧಾರವಾಡ, ಹಾವೇರಿ ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಮುನ್ನೆಚ್ಚರಿಕೆ ನೀಡಿದೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು ಭಾಗಗಳಿಗಿಲ್ಲ ಸಾರಿಗೆ ಸೇವೆ
ರಸ್ತೆ ಸಂಚಾರದಲ್ಲಿ ವ್ಯತ್ಯಯ ಮತ್ತು ನದಿ ತುಂಬಿ ಹರಿಯುತ್ತಿರುವುದರಿಂದ ಕಣ್ಣನೂರು, ಕಾಸರಗೋಡು, ತಲಿಚೇರಿ, ತೀರ್ಥಹಳ್ಳಿ, ಕೊಲ್ಲಾಪುರ, ಹೊರನಾಡು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಭಾಗಗಳಲ್ಲಿ ಬಸ್ ಸೇವೆ ಸಂಪೂರ್ಣ ನಿಲ್ಲಿಸಲಾಗಿದೆ. ಇತ್ತ ಕೊಯಿಕ್ಕಾಡ್, ಮಂಗಳೂರು, ಕುಂದಾಪುರ ಭಾಗಗಳಲ್ಲಿ ಎಂದಿನಂತೆ ಬಸ್ ಸಂಚಾರ ಮುಂದುವರೆದಿದೆ.