ಬೆಂಗಳೂರು : ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ನಿನ್ನೆ ಕೂಡ ವರುಣಾನ ಅರ್ಭಟ ಹೆಚ್ಚಾಗಿದೆ. ರಾಜಧಾನಿಯಲ್ಲಿ ಸಂಜೆ ಮತ್ತು ತಡ ರಾತ್ರಿ ಸುರಿದ ಭಾರಿ ಮಳೆಗೆ ಜನರು ಹೈರಾಣಾಗಿದ್ದಾರೆ.
ವಿಕೇಂಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಬಸ್ಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಾಗಿದ್ದು, ಮಳೆ ಶುರುವಾಗಿದ್ದರಿಂದ ಜನ ಸಂಕಷ್ಟ ಅನುಭವಿಸಬೇಕಾಯಿತು. ಮೆಜೆಸ್ಟಿಕ್, ಗಾಂಧಿನಗರ, ಯಶವಂತಪುರ, ದಾಸರಹಳ್ಳಿ, ರಾಜಾಜಿನಗರ, ಬಸವೇಶ್ವರನಗರ, ವಿಲ್ಸನ್ ಗಾರ್ಡನ್, ಶಾಂತಿ ನಗರ, ಕೋರಮಂಗಲ ಸೇರಿದಂತೆ ಹಲವೆಡೆ ಮಳೆಗೆ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಇದನ್ನೂ ಓದಿ: ಆರ್ಟಿಪಿಸಿಆರ್ ಟೆಸ್ಟ್ನಿಂದ ಹೊಸ ರೂಪಾಂತರ ವೈರಸ್ ಪತ್ತೆ ಸಾಧ್ಯವಿಲ್ಲ..
ತಡ ರಾತ್ರಿ ಕೂಡ ಸುಮಾರು ಅರ್ಧ ಗಂಟೆ ಗುಡುಗು-ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಿದೆ. ತಗ್ಗು ಪ್ರದೇಶದ ಹಲವೆಡೆ ಮಳೆ ನೀರು ನುಗ್ಗಿದ ಪರಿಣಾಮ ಇಲ್ಲಿನ ಜನ ಇನ್ನಿಲ್ಲದಂತೆ ಪರದಾಡಿದರು.
ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಎದ್ದಿರುವುದರಿಂದ ನಿನ್ನೆ ಕೂಡ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದ್ದು, ಬಸವನಗುಡಿ, ಜಯನಗರ, ಬನಶಂಕರಿ, ವಿಜಯನಗರ, ಯಲಹಂಕ, ಮೆಜೆಸ್ಟಿಕ್ ಸುತ್ತಮುತ್ತಲಿನ ಏರಿಯಾಗಳು ಜಲಾವೃತವಾಗಿವೆ. ರಾಜ್ಯದ ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದ ಸಾಧಾರಣ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿದ್ದು, ಉತ್ತರ ಒಳನಾಡು ಮತ್ತ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು.