ಬೆಂಗಳೂರು: ಬಂಗಾಳ ಕೊಲ್ಲಿಯ ಮಧ್ಯಭಾಗದಲ್ಲಿ ಮುಂದುವರೆದ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಕರಾವಳಿ ಪ್ರದೇಶ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದೆರಡು ದಿನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆಯ ತಜ್ಞರು ತಿಳಿಸಿದ್ದಾರೆ.
ಹಬ್ಬದ ಸಂಭ್ರಮದಲ್ಲಿ ಹೊರಗೆ ಬಂದಿದ್ದ ಜನ ಮಳೆಯಲ್ಲಿ ಪರದಾಟ:
ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಹಬ್ಬದ ಸಂಭ್ರಮದಲ್ಲಿ ಹೊರಗೆ ಬಂದಿದ್ದ ಜನ ಮಳೆಯಲ್ಲಿ ಸಿಲುಕಿದರು. ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ರಸ್ತೆಗಳ ಮೇಲೆ ನೀರು ನದಿಯಂತೆ ಹರಿದಿದೆ. ಪರಿಣಾಮ ವಾಹನ ಸವಾರರು ಫ್ಲೈ ಓವರ್ ಕೆಳಗೆ ಆಶ್ರಯ ಪಡೆದಿದ್ದ ದೃಶ್ಯ ಕಂಡು ಬಂತು.
ಬೆಂಗಳೂರಿನಲ್ಲಿ ಅಧಿಕ ಮಳೆ:
ನಿನ್ನೆ (ಗುರುವಾರ) ರಾತ್ರಿ ಬೆಂಗಳೂರಿನಲ್ಲಿ ಅಧಿಕ ಮಳೆಯಾಗಿದ್ದು, ಮೆಜೆಸ್ಟಿಕ್, ಶಾಂತಿನಗರ, ವಿಧಾನಸೌಧ, ರಾಜಾಜಿ ನಗರ, ಮತ್ತಿಕೆರೆ ಹಾಗು ಯಶವಂತಪುರ ಸೇರಿದಂತೆ ನಗರದ ಹಲವೆಡೆ ವರುಣ ಆರ್ಭಟಿಸಿದ್ದಾನೆ.
ಮಳೆಗೆ ರಸ್ತೆಗಳು ಕೊಚ್ಚಿ ಹೋಗಿವೆ. ಪೈಪ್ ಲೈನ್ ಕಾಮಗಾರಿ ನಡೆಸಿದ್ದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಉಂಟಾಗಿದ್ದು, 2 ಕಾರುಗಳು ಅದರೊಳಗೆ ಸಿಲುಕಿದ್ದವು. ಪಾಲಿಕೆ ಅಗ್ನಿಶಾಮಕ ದಳ ಸಿಬ್ಬಂದಿ ಕ್ರೇನ್ ಮೂಲಕ ಕಾರುಗಳನ್ನು ಮೇಲೆತ್ತಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ:
ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದೆ. ಬೆಳ್ತಂಗಡಿ, ಪುತ್ತೂರು ತಾಲೂಕಿನ ಹಲವೆಡೆ ಎಡೆಬಿಡದೆ ಮಳೆ ಸುರಿದಿದೆ. ಮುಂದಿನ ಎರಡು ದಿನಗಳ ಕಾಲ ಕೂಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇದನ್ನೂ ಓದಿ: ರಾಜಧಾನಿಯಲ್ಲಿ ವರುಣನ ಆರ್ಭಟ: ನಗರದೆಲ್ಲೆಡೆ ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ!