ಬೆಂಗಳೂರು: ಮಹಾನಗರ ಬೆಂಗಳೂರಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದ್ದು, ಇಬ್ಬರು ಬಲಿಯಾಗಿದ್ದಾರೆ. 24 ವರ್ಷದ ಮಿಥುನ್ ಸಾಗರ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರೆ, ದೇವಸಂದ್ರ ವಾರ್ಡ್ನಲ್ಲಿ ವಾಸವಾಗಿದ್ದ ಕಾವೇರಿನಗರದ ಮುನಿಯಮ್ಮ (60) ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ಇನ್ನು ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಭಾರಿ ಮಳೆ ಸುರಿದ ಕಾರಣ ರಾತ್ರಿ 12ರ ಸುಮಾರಿಗೆ ಕೆ ಆರ್ ಪುರದ ಗಾಯತ್ರಿ ಬಡಾವಣೆ ನೀರಿನಿಂದ ಆವರಿಸಿಕೊಂಡಿತ್ತು. ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದು, ಆತನ ಬೈಕ್ ನೀರಲ್ಲಿ ಕೊಚ್ಚಿ ಹೋಗುತ್ತಿತ್ತು.
ಆಗ ಬೈಕ್ ರಕ್ಷಿಸಲು ಮುಂದಾದ ಯುವಕ ಕೂಡ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಿಥುನ್ ಸಾಗರ್ ಸಿವಿಲ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಸದ್ಯ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಜಂಟಿ ಕಾರ್ಯಚರಣೆ ನಡೆಸಿವೆ. ರಾಜಕಾಲುವೆಯ ಅಂಡರ್ ಪಾಸ್ ಓಪನ್ ಮಾಡಿ ರಬ್ಬರ್ ಬೋಟ್ ಮೂಲಕ ಶೋಧ ಕಾರ್ಯ ನಡೆದಿದೆ. ಮಳೆ ನೀರು ವೇಗವಾಗಿ ಹರಿಯುತ್ತಿರುವ ಹಿನ್ನೆಲೆ ಕಾರ್ಯಾಚರಣೆ ಅಡ್ಡಿಯಾಗಿದೆ.
ಅಗ್ನಿಶಾಮಕದಳ ಹಾಗೂ ಎಸ್.ಡಿ.ಆರ್.ಎಫ್ ಸಿಬ್ಬಂದಿ ಎರಡು ತಂಡಗಳಾಗಿ ಯುವಕನ ಹುಡುಕಾಟ ನಡೆಸಿವೆ. ರಾಜಕಾಲುವೆ ಮಾರ್ಗದಲ್ಲಿನ ಕಬ್ಬಿಣದ ಜಾಲರಿಗಳಲ್ಲಿ ಮೊದಲಿಗೆ ಹುಡುಕಾಟ ನಡೆದಿದೆ. ಇಲ್ಲಿ ಯುವಕ ಪತ್ತೆಯಾಗದಿದ್ದಲ್ಲಿ ಕೆರೆಯಲ್ಲಿ ಶೋಧಕಾರ್ಯ ನಡೆಸುವ ಸಾಧ್ಯತೆ ಇದೆ.
ರಾಜಧಾನಿಯ ಎಲ್ಲ ಕಡೆ ಶುಕ್ರವಾರ ಸಂಜೆಯ ನಂತರ ಮಳೆ ಮತ್ತೆ ಪ್ರಾರಂಭವಾಗಿ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು . ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿ, ರಾತ್ರಿ ಮನೆಗೆ ತೆರಳುತ್ತಿರುವ ವಾಹನ ಸವಾರರು ಹೈರಾಣಾದರು.
ನಗರದ ಬನ್ನೇರುಘಟ್ಟ, ನೆಲಮಂಗಲ, ರಿಚ್ಮಂಡ್ ಸರ್ಕಲ್, ಶಾಂತಿನಗರ, ಮೆಜೆಸ್ಟಿಕ್, ಎಂ.ಜಿ ರಸ್ತೆ, ಲಾಲ್ಬಾಗ್, ಬಸವನಗುಡಿ, ಜಯನಗರ, ಜೆ.ಪಿ ನಗರ, ಕೋರಮಂಗಲ, ಹಲಸೂರಿನ, ಶೇಷಾದ್ರಿಪುರ ಮಲ್ಲೇಶ್ವರ, ಫ್ರೀಡಂ ಪಾರ್ಕ್, ಕೆ.ಆರ್.ವೃತ್ತ, ಕಾರ್ಪೋರೇಷನ್ ವೃತ್ತ, ಮೈಸೂರು ರಸ್ತೆ, ಜಯನಗರ, ಲಾಲ್ ಬಾಗ್ ರಸ್ತೆಯಲ್ಲಿ ಭಾರಿ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ.
(ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆ ಅಬ್ಬರ: ಜನ ಸಾಮಾನ್ಯರು ಹೈರಾಣು)