ಬೆಂಗಳೂರು: ಮಳೆಯಿಂದ ಮಹಾನಗರದ ಹಲವು ಕಡೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿರುವುದರಿಂದ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಇಂಜಿನಿಯರ್‌ಗಳ ತುರ್ತು ಸಭೆ ಕರೆದಿದ್ದು, ರಾಜಕಾಲುವೆ ದುರಸ್ತಿ ಮತ್ತು ಹೊಸ ಕಾಲುವೆಗಳ ನಿರ್ಮಾಣ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಧ್ಯಾಹ್ನ 12 ಗಂಟೆಗೆ ಬಿಬಿಎಂಪಿಯಲ್ಲಿ ಎಲ್ಲ ಇಂಜಿನಿಯರ್‌ಗಳ ಸಭೆ ಮಾಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹೆಚ್ಚಿನ ಮಳೆ ಬಂದಾಗ ರಾಜಕಾಲುವೆ ತುಂಬಿ ಹರಿದು ಮನೆಗಳಿಗೆ ನೀರು ನುಗ್ಗುವಂತಹ ಘಟನೆಗಳ ತಡೆಗಟ್ಟುವ ಹಿನ್ನೆಲೆಯಲ್ಲಿ ಸಭೆ ಮಾಡುತ್ತಿದ್ದೇನೆ. ಈಗಾಗಲೇ ಕೆಲವು ಸ್ಥಳಗಳ ಪರಿಶೀಲನೆ ಆರಂಭವಾಗಿದ್ದು, ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿ ಕೂಡಲೇ ದುರಸ್ತಿ ಕಾರ್ಯ ನಡೆಸಲು ಮತ್ತು ಹೊಸ ಕಾಲುವೆ ನಿರ್ಮಿಸಲು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಸಭೆಗೂ ಮುನ್ನ ಕೆ.ಆರ್.ಪುರಂ ವ್ಯಾಪ್ತಿಯ ಹೆಣ್ಣೂರು ರಸ್ತೆ ಹಾಗೂ ಇತರ ಕಡೆ ಹೋಗಿ ಪರಿಶೀಲನೆ ನಡೆಸಲಿದ್ದೇನೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಲಖನ್ ಸ್ಪರ್ಧೆಯಿದ ಬಿಜೆಪಿಗೆ ಹಿನ್ನಡೆಯಾಗಲ್ಲ: ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಗೆದ್ದೇ ಗೆಲ್ಲುತ್ತಾರೆ. ಲಖನ್ ಸ್ವತಂತ್ರವಾಗಿ ನಿಂತಿದ್ದು ಯಾಕೆ ಎಂದು ಗೊತ್ತಿಲ್ಲ. ಅವರು ನಮ್ಮ ಪಕ್ಷದಲ್ಲಿ ಇಲ್ಲ. ಅವರು ತಮ್ಮದೇ ನಿರ್ಧಾರ ತೆಗೆದುಕೊಂಡು ನಿಂತಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಜೊತೆ ಮಾತುಕತೆ ನಡೆಸುತ್ತಿದ್ದು, ವಿಷಯ ತಿಳಿದುಕೊಳ್ಳುತ್ತಿದ್ದೇನೆ.
ಬಿಜೆಪಿ ಅಭ್ಯರ್ಥಿಯ ಜೊತೆ ಬಂದು ಬಿಜೆಪಿ ಗೆಲ್ಲಿಸುವುದೇ ನಮ್ಮ ಗುರಿ ಎಂದು ಈಗಾಗಲೇ ರಮೇಶ್ ಜಾರಕಿಹೊಳಿ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿಗೆ ಏನೂ ತೊಂದರೆ ಇಲ್ಲ ಸಿಎಂ ಭರವಸೆ ವ್ಯಕ್ತಪಡಿಸಿದರು.
ಲಖನ್ ನಮ್ಮ ಪಕ್ಷದವರಲ್ಲ ಸ್ವತಂತ್ರ ಅಭ್ಯರ್ಥಿ. ನಮ್ಮ ಮತಗಳನ್ನು ನಮ್ಮ ಅಭ್ಯರ್ಥಿಗೆ ಹಾಕಿಸಬೇಕು. ಅದಕ್ಕೆ ಜಾರಕಿಹೊಳಿ ಸಹೋದರರು ಶ್ರಮಿಸಲಿದ್ದಾರೆ. ಅಲ್ಲಿಯ ವಸ್ತುಸ್ಥಿತಿ ಬಗ್ಗೆ ಇಂದು ಚರ್ಚೆ ಮಾಡೋಣ ಎಂದು ಜಾರಕಿಹೊಳಿ ಸಹೋದರರಿಗೆ ಹೇಳಿದ್ದೇನೆ. ಎ.ಮಂಜು ಪ್ರಕರಣಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಲಖನ್ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಕುರಿತು ಜಾರಕಿಹೊಳಿ ಸಹೋದರರೊಂದಿಗೆ ನಾನು ಮಾತನಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ACB Raid... ಬೆಳ್ಳಂಬೆಳಗ್ಗೆ ಎಸಿಬಿ ಬಿಗ್ ಶಾಕ್: ರಾಜ್ಯದೆಲ್ಲೆಡೆ ಏಕಕಾಲಕ್ಕೆ 60 ಕಡೆ ದಾಳಿ