ಬೆಂಗಳೂರು: ನಗರದಲ್ಲಿ ನಿನ್ನೆ ಅಬ್ಬರಿಸಿದ್ದ ಮಳೆ ಇಂದು ಸಹ ಮುಂದುವರಿದಿದೆ. ಸಂಜೆಯಿಂದ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ನಗರದಲ್ಲಿ ಬೆಳಗ್ಗೆಯಿಂದಲೇ ಸಣ್ಣದಾಗಿ ಆರಂಭವಾದ ಮಳೆ ಸಂಜೆ ವೇಳೆಗೆ ಬಿರುಸುಗೊಂಡಿದೆ. ಕೆಲವೆಡೆ ತಗ್ಗು ಪ್ರದೇಶಗಲಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುತ್ತಿದ್ದಾರೆ. ದಕ್ಷಿಣ, ಪಶ್ಚಿಮ, ಪೂರ್ವ ವಲಯ ವ್ಯಾಪ್ತಿಯಲ್ಲಿ ಅಧಿಕ ಮಳೆ ದಾಖಲಾಗಿದೆ.
ನಗರದಲ್ಲಿ ಇಡೀ ದಿನ ಮೋಡ ಕವಿದ ಚಳಿಯ ವಾತಾವರಣವಿತ್ತು. ಭಾನುವಾರ ರಜಾ ದಿನದ ಹಿನ್ನೆಲೆಯಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಮಳೆಯಿಂದಾಗಿ ಚರಂಡಿಯಲ್ಲಿ ತುಂಬಿದ ನೀರು ರಸ್ತೆಗೆ ನುಗ್ಗಿ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಅಲ್ಲಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ, ದೊಡ್ಡ ಪ್ರಮಾಣದಲ್ಲಿ ಯಾವುದೇ ಹಾನಿಯಾಗಿರುವುದು ವರದಿಯಾಗಿಲ್ಲ ಎಂದು ಪಾಲಿಕೆ ತಿಳಿಸಿದೆ.
ಹಲಸೂರಿನ ಗಂಗಾಧರ ಚೆಟ್ಟಿ ರಸ್ತೆ, ರಾಜರಾಜೇಶ್ವರಿ ನಗರದ ಅಡಿಗೆ ಒಡೆಯರ ಹಳ್ಳಿ, ನವರಂಗ್ ಬಳಿ ಮರದ ಕೊಂಬೆ ರಸ್ತೆಗೆ ಬಿದ್ದು, ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿದೆ.
2 ದಿನ ಮಳೆ: ಇನ್ನೂ ಎರಡು ದಿನ ನಗರದಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ; ಕಲಬುರಗಿ ಜಿಲ್ಲೆಯಾದ್ಯಂತ ಮುಂದುವರೆದ ವರುಣಾರ್ಭಟ.. ಜನ ಹೈರಾಣ