ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಭಾರಿ ಅವಾಂತರವನ್ನೇ ಸೃಷ್ಟಿಸುತ್ತಿದ್ದಾನೆ. ಅಂಕೋಲದ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ, ಪ್ರವಾಹ ಪರಿಸ್ಥಿತಿ ಉದ್ಬವವಾಗಿದೆ. ರಾಷ್ಟ್ರೀಯ ಹೆದ್ದಾರಿ-66 ಸಂಪೂರ್ಣವಾಗಿ ಬಂದ್ ಆಗಿದೆ. ಸಂಪರ್ಕ ಕಡಿತದಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಮಳೆ ವೃದ್ಧನೋರ್ವನನ್ನು ಬಲಿ ಪಡೆದಿದೆ. ದನದ ಕೊಟ್ಟಿಗೆ ಕುಸಿದುಬಿದ್ದ ಕಾರಣ 65 ವರ್ಷದ ಬಸವೇಗೌಡ ಮೃತಪಟ್ಟರು. ಇನ್ನು, ಮಳೆನಾಡಿನ ಶಿವಮೊಗ್ಗದಲ್ಲೂ ವರುಣಾರ್ಭಟ ಜೋರಾಗಿದೆ. ಜಿಲ್ಲೆಯ ಕೆಲವೆಡೆ ಮನೆಗಳು ಕುಸಿತವಾಗಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ.
ಇದನ್ನೂ ಓದಿ: ಮೂರು ದಿನ ಹೆಚ್ಚು ಮಳೆ ಸಾಧ್ಯತೆ.. ಎಲ್ಲಾ ಡಿಸಿಗಳಿಗೆ ಅಲರ್ಟ್ ಇರಲು ಸೂಚನೆ.. ಕಂದಾಯ ಸಚಿವ ಆರ್ ಅಶೋಕ್
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರೇಬೂದಿಗಾಳ ಗ್ರಾಮಕ್ಕೆ ಹಳ್ಳದ ನೀರು ನುಗ್ಗಿದೆ. ಹೀಗಾಗಿ, ಜೀನಜೀವನ ಅಸ್ತವ್ಯಸ್ತವಾಗಿದೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಮನೆಗಳಿಂದ ಹೊರಬರಲು ಜನರಿಗೆ ಕಷ್ಟವಾಗುತ್ತಿದೆ.
ಸತತ ಮಳೆಯಿಂದಾಗಿ ರಾಜ್ಯದ ಹಲವು ಜಲಾಶಯಗಳು ಬಹುತೇಕ ತುಂಬಿವೆ. ಕೆಲವು ಡ್ಯಾಂಗಳಿಂದ ನೀರು ಹೊರ ಬಿಡಲಾಗುತ್ತಿದೆ. ಜಲಪಾತಗಳ ವೀಕ್ಷಣೆಗೆ ಬರುವ ಪ್ರವಾಸಿಗರು ಕೂಡ ಎಚ್ಚರಿಕೆ ವಹಿಸಬೇಕಾಗಿದೆ.