ಬೆಂಗಳೂರು: ಮಹಾಮಾರಿ ಕೋವಿಡ್‌ನಿಂದ ತತ್ತರಿಸಿದ್ದ ಜನರಿಗೆ ಅನ್‌ಲಾಕ್ ಕೊಂಚ ರಿಲೀಫ್ ನೀಡಿತ್ತು. ಕುಸಿದಿದ್ದ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುಷ್ಟರಲ್ಲಿ ರಾಜ್ಯದ ಹಲವೆಡೆ ಮುಂಗಾರು ಮಳೆ ಭಾರಿ ಹೊಡೆತ ನೀಡಿದೆ. ಮೂರ್ನಾಲ್ಕು ದಿನಗಳಿಂದ ವರುಣನ ಆರ್ಭಟದಿಂದ ಜನ ನಲುಗಿ ಹೋಗಿದ್ದಾರೆ.
ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಇಂದು ಕೂಡ ಧಾರಾಕಾರ ಮಳೆ ಮುಂದುವರಿದಿದೆ. ಭಾರೀ ಮಳೆಗೆ ಮನೆ ಕುಸಿದು ಬಿದ್ದಿದ್ದು, ತಾಲೂಕಿನ ಬಾಳೆಹಳ್ಳಿಯಲ್ಲಿ ನಡೆದಿರುವ ಈ ಘಟನೆಯಲ್ಲಿ ಜಯರಾಂ ಎಂಬುವರ ಕುಟುಂಬ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದೆ. ಇತ್ತ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಕೃಷ್ಣಾ ನದಿ ತಟದಲ್ಲಿರುವ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲ ಜಲಾವೃತ್ತಗೊಂಡಿದೆ.
ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಬೆಳಗಾವಿ ಜಿಲ್ಲೆಗೆ ಪೆಟ್ಟು ನೀಡಿದೆ. ಚಿಕ್ಕೋಡಿಯ ರಾಮನಗರ ಕಾಲೋನಿಯಲ್ಲಿ ನಿನ್ನೆ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ 10 ವರ್ಷದ ಬಾಲಕಿ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಇವತ್ತು ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸಿ ಬಾಲಕಿ ಶವ ಹೊರೆತೆಗೆದಿದ್ದಾರೆ. ಗೋಕಾಕ ನಾಕಾ ಬಳಿ ಇರುವ ನಿಮ್ರಾ ಆಸ್ಪತ್ರೆಗೆ ನುಗ್ಗಿದ್ದು, ಒಳಗಿದ್ದ ರೋಗಿಗಳು ಪರದಾಟ ನಡೆಸಿದರು. ಹಳೇ ತಹಶೀಲ್ದಾರ್ ಕಚೇರಿ ಹಾಗೂ ಕಿಲ್ಲಾ ಪ್ರದೇಶಗಳು ಜಲಾವೃತಗೊಂಡಿವೆ.
ಇತ್ತ ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲಾಶಯದಿಂದ ನಿರಂತರವಾಗಿ ನೀರನ್ನ ಹೊರ ಬಿಟ್ಟ ಕಾರಣ ಹಲವಾರು ಮನೆಗಳು ಧರೆಗುರುಳಿದ್ದು, ಜನರ ಬದುಕು ನೀರುಪಾಲಾಗಿದೆ. ಜಲಾಶಯದಿಂದ ಇವತ್ತು ಕೂಡ 1.5 ಲಕ್ಷ ಕ್ಯೂಸೆಕ್ ನೀರನ್ನ ಹೊರಬಿಟ್ಟ ಪರಿಣಾಮ ಕಾಳಿ ನದಿ ತೀರದ ಮಂದಿಗೆ ಸಂಕಷ್ಟ ತಪ್ಪಿಲ್ಲ.