ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆ ಹಿನ್ನೆಲೆ 40 ದಿನದ ಮಗುವನ್ನು ಆ್ಯಂಬುಲೆನ್ಸ್ ಮೂಲಕ ಮಂಗಳೂರಿನಿಂದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಆ್ಯಂಬುಲೆನ್ಸ್ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಜೀರೊ ಟ್ರಾಫಿಕ್ ವ್ಯವಸ್ಥೆ ಮಾಡಿಕೊಡಲಾಯಿತು.
ಮಗುವನ್ನು ತುರ್ತು ಚಿಕಿತ್ಸಾ ಘಟಕ್ಕೆ ದಾಖಲಿಸಲಾಗಿದ್ದು, ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. 40 ದಿನದ ಮಗುವಿಗೆ ಯಾವ ರೀತಿಯ ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಬಳಿಕ ಚಿಕಿತ್ಸೆಯ ಬಗ್ಗೆ ನಿರ್ಧರಿಸಬೇಕಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ಬೆಂಗಳೂರಿಗೆ ಮಗುವನ್ನು ಕರೆತಂದ ಆ್ಯಂಬುಲೆನ್ಸ್ ಚಾಲಕ ಹನೀಫ್ ಅವರ ಸೇವೆಗೆ ಡಾ.ಮಂಜುನಾಥ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ರೀತಿ ಸೇವೆ ಮಾಡಲು ನನಗಿಷ್ಟ. ಮಗುವಿನ ಕುಟುಂಬಸ್ಥರು ಬಡವರು. ಹೀಗಾಗಿ ಉಚಿತವಾಗಿ ಕರೆದುಕೊಂಡು ಬಂದಿದ್ದೇನೆ ಎಂದು ಹನೀಫ್ ಹೇಳಿದರು. ಬಳಿಕ ಆಸ್ಪತ್ರೆಯಲ್ಲೇ ಹನೀಫ್ಗೆ ಸನ್ಮಾನ ಮಾಡಲಾಯಿತು.