ಬೆಂಗಳೂರು: ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ವೈದ್ಯಕೀಯ ಸೀಟ್ ಕೂಡ ಲ್ಯಾಪ್ಸ್ ಆಗಿಲ್ಲ. ಖಾಸಗಿ ಕೋಟಾದಲ್ಲಿ ಖಾಲಿ ಇರುವ ಸೀಟ್ಗಳನ್ನು ಮೆರಿಟ್ ಮೂಲಕ ತುಂಬಿಸಲಾಗುತ್ತದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸೀಟುಗಳನ್ನು ತುಂಬಿಸಲಾಗುತ್ತದೆ. ಎಲ್ಲಿಯೂ ಒಂದೇ ಒಂದು ಸೀಟ್ ಲ್ಯಾಪ್ಸ್ ಆಗಲ್ಲ. ಕ್ಲಿನಿಕ್ ಮತ್ತು ಪ್ಯಾರಾ ಮೆಡಿಕಲ್ ಬಿಟ್ಟರೆ ಬೇರೆ ಯಾವುದೇ ಬಾಕಿ ಇರಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಚಿದಾನಂದ್ ಎಂ ಗೌಡ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ನೀಡುತ್ತಿರುವ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ವಿದ್ಯಾಲಯಗಳು ಎಷ್ಟು.?, ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ಗಳ ಸಂಖ್ಯೆ ಎಷ್ಟು?, ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು ನಮ್ಮ ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ 67 ವೈದ್ಯಕೀಯ ಕಾಲೇಜುಗಳು ಇವೆ. ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸೀಟ್ಗಳು ಇವೆ. ಮೆಡಿಕಲ್ ಸೀಟ್ಗಾಗಿ ಮೂರು ಸುತ್ತಿನಲ್ಲಿ ಕೌನ್ಸೆಲಿಂಗ್ ನಡೆಯುತ್ತದೆ. ಮಾಪ್-ಅಪ್ ರೌಂಡ್ (Mop - Up Round) ನಂತರ ಬಾಕಿ ಉಳಿದ ಸೀಟ್ಗಳನ್ನು ಮೆರಿಟ್ ಮೂಲಕ ವಿದ್ಯಾರ್ಥಿಗಳಿಗೆ ನೀಡಲು ಆಯಾ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತಿದೆ ಎಂದರು.
ಸಚಿವರ ಉತ್ತರ ನಂತರ ಪರಿಷತ್ ಸದಸ್ಯ ವೈ.ನಾರಾಯಣಸ್ವಾಮಿ ಮಾತನಾಡಿ, ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳಲ್ಲಿ ಕೆಲವರು ಮಾಪ್-ಅಪ್ ರೌಂಡ್ಗೆ ಎಲಿಜಿಬಲ್ ಆಗುತ್ತಾರೆ. ಅವರು ಒರಿಜಿನಲ್ ಮಾರ್ಕ್ಸ್ ಕಾರ್ಡ್ ಅನ್ನು ಯುದ್ಧದ ಸಮಯದಲ್ಲಿ ಕಳೆದುಕೊಂಡಿದ್ದಾರೆ. ಅವರಿಗೆ ಇಲ್ಲಿನ ಮಾಪ್-ಅಪ್ ರೌಂಡ್ಗೆ ಅವಕಾಶ ಕೊಡಿ. ಜೆರಾಕ್ಸ್ ಮಾರ್ಕ್ಸ್ ಕಾರ್ಡ್ ಇಟ್ಟುಕೊಂಡು ಅವಕಾಶ ಕೊಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಗೋಶಾಲೆ ನಿರ್ಮಾಣ ಕುರಿತು ಪ್ರಶ್ನಿಸಿದರೆ ಕೇವಲ ಕಾಗದ ತೋರಿಸುತ್ತೀರಿ: ಹೈಕೋರ್ಟ್ ಅಸಮಾಧಾನ!