ಬೆಂಗಳೂರು: ಯುಗಾದಿ ಹಬ್ಬವಾಗಲಿ, ರಂಜಾನ್ ಆಗಲಿ ಕೋವಿಡ್ ನಿಯಮ ಜಾರಿಯಲ್ಲಿದೆ. ಹಬ್ಬಕ್ಕೆ ಯಾವುದೇ ವಿನಾಯಿತಿ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಒಂದೇ ದಿನ ಏಳು ಸಾವಿರ ಪಾಸಿಟಿವ್ ಕೇಸ್ ಬಂದಿದೆ. ಬೆಂಗಳೂರಿನಲ್ಲಿ ಐದು ಸಾವಿರ ಕೇಸ್ ಬಂದಿದೆ. ಬಿಬಿಎಂಪಿ ಆಯುಕ್ತರು, ನಗರಾಡಳಿತ ತಜ್ಞರ ಜೊತೆ ಸಭೆ ಮಾಡುತ್ತೇನೆ. ಬಿಬಿಎಂಪಿ ಎಂಟು ವಲಯ ರಚನೆ ಮಾಡಿದ್ದು, ಕ್ಯಾಬಿನೆಟ್ ಸಚಿವರ ನೇಮಕ ಮಾಡಿದ್ದಾರೆ. ಎಲ್ಲರನ್ನೊಳಗೊಂಡ ನಿಯೋಗ ಮಾಡಿದ್ದಾರೆ. ಸೋಂಕು ನಿಯಂತ್ರಣಕ್ಕೆ ಆಡಳಿತಾತ್ಮಕವಾಗಿ ಏನೆಲ್ಲಾ ಕ್ರಮಕೈಗೊಳ್ಳಬೇಕು ಅನ್ನೋ ಚರ್ಚೆ ಮಾಡುತ್ತೇವೆ ಎಂದರು.
ಪ್ರಧಾನಮಂತ್ರಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ಮಾಡಲಿದ್ದಾರೆ. ಸಭೆಯಲ್ಲಿ ದೇಶದಲ್ಲಿರೋ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಎರಡನೇ ಅಲೆ ನಿಯಂತ್ರಣ, ಮಾರ್ಗಸೂಚಿ ಬಗ್ಗೆ ಅನುಷ್ಠಾನ ಬಗ್ಗೆ ಚರ್ಚೆ ಮಾಡಲಿದ್ದಾರೆ. ಸಿಎಂ ಕೂಡ ರಾಜ್ಯದ ಸ್ಥಿತಿ ಗತಿ ಬಗ್ಗೆ ಪ್ರಧಾನಿಗೆ ತಿಳಿಸಲಿದ್ದಾರೆ. ಐವತ್ತು ಲಕ್ಷಕ್ಕೂ ಅಧಿಕ ಲಸಿಕೆ ಕೊಡುವ ಕೆಲಸ ಆಗಲಿದೆ ಎಂದು ಹೇಳಿದರು.
13 ಜಿಲ್ಲೆಗಳ ಜಿಲ್ಲಾಡಳಿತದ ಜೊತೆ ನಿನ್ನೆ ವಿಡಿಯೋ ಸಂವಾದ ಮಾಡಲಾಗಿದೆ. 13 ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಅವರಿಗೆ ನಿರ್ದಿಷ್ಟ ಮಾರ್ಗಸೂಚಿ ನೀಡಲಾಗಿದ್ದು, ಪ್ರತೀ ಜಿಲ್ಲೆಗಳಲ್ಲಿ ವಾರ್ ರೂಮ್, ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಲಸಿಕೆ ಯಾವುದೇ ಕಾರಣಕ್ಕೂ ಕಡಿಮೆ ಆಗಬಾರದು. ಮಾಹಿತಿ ಒದಗಿಸಬೇಕು. ಎರಡನೇ ಅಲೆ ಹೆಚ್ಚು ಹರಡದಂತೆ ಕ್ರಮ ವಹಿಸಲು ಸೂಚಿಸಲಾಗಿದೆ.
ಇಂದು ಪ್ರಧಾನಿ ಜೊತೆ ಸಭೆಯಲ್ಲಿ ಕಠಿಣ ನಿಯಮ ಜಾರಿ ಸಾಧ್ಯತೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈಶಾನ್ಯ ಭಾಗದ ಆರೇಳು ರಾಜ್ಯ ಸೇರಿದರೂ ಕಡಿಮೆ ಸೋಂಕಿದೆ. ಆದರೆ, ಮಹಾರಾಷ್ಟ್ರ ರಾಜ್ಯದಲ್ಲಿ ಐವತ್ತು, ಅರವತ್ತು ಸಾವಿರ ಕೇಸ್ ಬರ್ತಿದೆ. ಎಲ್ಲದಕ್ಕೂ ಸೇರಿ ಯೂನಿಫಾರ್ಮ್ ಗೈಡ್‌ಲೈನ್ಸ್ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸಬಹುದು. ಈ ಬಗ್ಗೆ ಸಿಎಂ ಜೊತೆ ಸಮಾಲೋಚನೆ ಮಾಡಲಾಗುವುದು. ನಂತರ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದರು.
ಇದನ್ನೂ ಓದಿ: ಸರ್ಕಾರ ನಡೆಸುವುದು ನಮಗೆ ಗೊತ್ತಿದೆ: ಗರಂ ಆದ ಸಿಎಂ