ಬೆಂಗಳೂರು: ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕೆ, ಸೃಜನಶೀಲತೆ, ಉದ್ಯಮಶೀಲತೆಯ ತವರಾದ ಕರಾವಳಿ ಈಗ ಕೊಲೆಗಳ ಆಡಂಬೋಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 10 ದಿನಗಳಲ್ಲಿ 3 ಕೊಲೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಂತರಿಕ ಭದ್ರತೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಇದೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿನಲ್ಲಿ ಇದ್ದಾಗಲೇ 3ನೇ ಕೊಲೆ ಆಗಿದೆ. ಅಷ್ಟರಲ್ಲಿ ಸಿಎಂ ಸಾಹೇಬರು ಜಿಲ್ಲೆಯಿಂದ ಕಾಲ್ಕಿತ್ತಿದ್ದಾರೆ. ಅಲ್ಲೇ ಉಳಿದು ಪರಿಸ್ಥಿತಿ ಅವಲೋಕಿಸಿ, ಕೊಲೆಗೆಡುಕರನ್ನು ಹಡೆಮುರಿ ಕಟ್ಟುವಂತೆ ಕಟ್ಟಾಜ್ಞೆ ಮಾಡುವ ಧೈರ್ಯವನ್ನು ತೋರಲಿಲ್ಲ. ಅವರ ಅಧೈರ್ಯಕ್ಕೆ ಕಾರಣವೇನು?, ಕಾಣದ ಕೈಗಳ ಒತ್ತಡವೇನಾದರೂ ಉಂಟಾ? ಎಂದು ಪ್ರಶ್ನಿಸಿದ್ದಾರೆ.
ಮನೆ, ಮನಗಳಲ್ಲಿ ಮಾತ್ರ ಇರಬೇಕಿದ್ದ ಧರ್ಮವನ್ನು ವ್ಯಸನವನ್ನಾಗಿಸಿ ಕೈಗೆ ದೊಣ್ಣೆ, ಶೂಲ ಕೊಟ್ಟು ಯುವಕರ ನಿಷ್ಕಲ್ಮಶ ಮುಗ್ಧಮನಸ್ಸಿಗೆ 'ಕೋಮು ಪ್ರಾಶನ' ಮಾಡಿದ ದುಷ್ಪರಿಣಾಮವೇ ಸರಣಿ ಕೊಲೆಗಳು. ಧರ್ಮ ನಿರಪೇಕ್ಷತೆ ತತ್ತ್ವವನ್ನು ನಿರ್ನಾಮ ಮಾಡಿದ್ದೇ ಇದಕ್ಕೆಲ್ಲ ಮೂಲ ಕಾರಣ. ಮಸೂದ್, ಪ್ರವೀಣ್ ನೆಟ್ಟಾರು, ಈಗ ಫಾಸಿಲ್. ಇನ್ನೆಷ್ಟು ಕೊಲೆಗಳು ನಡೆದರೆ ಸರ್ಕಾರಕ್ಕೆ ತೃಪ್ತಿ?. ಸರಣಿ ಕೊಲೆಗಳಿಂದ ಕರಾವಳಿಗೆ ಮಾತ್ರವಲ್ಲ, ಕರ್ನಾಟಕದ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ. ಈ ಅರಾಜಕತೆಯಿಂದ ಇಡೀ ಕರಾವಳಿಯ ಆರ್ಥಿಕತೆಯೇ ಬುಡಮೇಲಾಗುತ್ತಿದೆ. ಆದರೆ, ಬಿಜೆಪಿ ಸರ್ಕಾರ ಸಾವಿನಲ್ಲೂ 'ಕೊಲೆಗಡುಕ ರಾಜಕಾರಣ' ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಕೊಲೆಗಳ ಹಿಂದಿನ ಕಾರಣ ಬೇಧಿಸಿ ಕೊಲೆಗೆಡುಕರನ್ನು ಹತ್ತಿಕ್ಕುವ ಕೆಲಸ ಮಾಡಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರ, ಪ್ರತಿ ಕೊಲೆಗೂ ತಾನೇ ಮುಂದೆ ನಿಂತು ಹೊಸಹೊಸ ಟ್ವಿಸ್ಟ್ ನೀಡುತ್ತಿದೆ. ಸರ್ಕಾರದ ಕೆಲಸ ಬಿಗಿ ಆಡಳಿತ ನಡೆಸುವುದೇ ಹೊರತು ಬೀದಿಯಲ್ಲಿ ನಿಂತು ಗಂಟಲು ಹರಿದುಕೊಳ್ಳುವುದಲ್ಲ. ಕರಾವಳಿಯಲ್ಲಿ ನೆಮ್ಮದಿ ನೆಲಸಬೇಕಾದರೆ, ಪೊಲೀಸ್ ವ್ಯವಸ್ಥೆಗೆ ಶಕ್ತಿ ತುಂಬಬೇಕು. ಕಾಣದ ಕೈಗಳ ಸಂಕೋಲೆಯಿಂದ ಇಲಾಖೆಯನ್ನು ಮುಕ್ತಗೊಳಿಸಿ ಅಧಿಕಾರಿಗಳು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸುವ ವಾತಾವರಣ ನಿರ್ಮಿಸಬೇಕು. ಇಲ್ಲವಾದರೆ, ಡಬಲ್ ಎಂಜಿನ್ ಸರ್ಕಾರಕ್ಕೆ ಜನರೇ ಬೆಂಕಿ ಹಾಕಿಯಾರು ಎಂದು ಹೆಚ್ಡಿಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಯುವಕನ ಹತ್ಯೆ: ನಿಷೇಧಾಜ್ಞೆ ಜಾರಿ, ಶಾಲಾ-ಕಾಲೇಜಿಗೆ ರಜೆ, ಮದ್ಯದಂಗಡಿ ಬಂದ್