ಬೆಂಗಳೂರು : ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಎಪಿಎಂಸಿ ಕಾಯ್ದೆ ಮಾರುಕಟ್ಟೆಯನ್ನೇ ಮುಚ್ಚುವ ಯೋಜನೆಯಾಗಿದೆ ಎಂದು ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಅವರ ಆದೇಶದ ಮೇರೆಗೆ ಎಪಿಎಂಸಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಹೊರಟಿದೆ. ಆದರೆ, ಈ ತಿದ್ದುಪಡಿಯಿಂದ 600 ಕೋಟಿ ರೂ. ರಾಜ್ಯ ಸರ್ಕಾರಕ್ಕೆ ಕಡಿತ ಆಗುತ್ತದೆ. ಅಲ್ಲದೆ ಇದು ಎಪಿಎಂಸಿ ಮಾರುಕಟ್ಟೆಯನ್ನೇ ಮುಚ್ಚುವ ಹುನ್ನಾರವಾಗಿದೆ ಎಂದು ದೂರಿದರು.
ಮಹಾರಾಷ್ಟ್ರದಲ್ಲಿ ಇಂತಹ ಯೋಜನೆಗಳನ್ನ ಜಾರಿಗೆ ತಂದು ಅದು ಫೇಲ್ ಆಗಿದೆ. ಹೀಗಾಗಿ ಇದೀಗ ಆ ರಾಜ್ಯದಲ್ಲಿ ಮತ್ತೆ ಮೊದಲಿನ ಹಾಗೆ ಮಾಡಲು ಮುಂದಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಸರ್ಕಾರ ರೈತರ ಬುಡಕ್ಕೆ ತರಲು ಹೊರಟಿದ್ದಾರೆ. ಎಪಿಎಂಸಿ ಅಧಿಕಾರ ಮೊಟಕುಗೊಳಿಸಿ ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಇದು ಎಂದು ಕಿಡಿಕಾರಿದರು.
ರೈತನ ಹೊಲದಲ್ಲೇ ಯಾರೋ ಬಂದು ಬೆಳೆ ಖರೀದಿ ಮಾಡಿ ಮೋಸ ಮಾಡಿ ಹೋದರೆ ರೈತರಿಗೆ ಹೇಗೆ ನ್ಯಾಯ ಕೊಡಿಸುತ್ತಾರೆ? ಇದರ ಅವಶ್ಯಕತೆ ಏನಿದೆ? ತರಾತುರಿಯಲ್ಲಿ ಯಾಕೆ ಜನ ವಿರೋಧಿ ಕಾನೂನುಗಳನ್ನು ತರ್ತೀರಾ? ಉಳ್ಳವರಿಗೆ ಸಂತೃಪ್ತಿಗೊಳಿಸಲು ಈ ರೀತಿ ಮಾಡ್ತಿದ್ದೀರಾ? ಹಾಗೆ ಹೊಸ ಕಾನೂನು ಜಾರಿಗೆ ತರಲೇಬೇಕು ಎಂದರೆ ತಕ್ಷಣ ಅಧಿವೇಶನ ಕರೆಯಿರಿ ಎಂದು ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು.
ಕಾರ್ಮಿಕ ಕಾಯ್ದೆ ತಿದ್ದುಪಡಿಗೂ ಹೆಚ್ಡಿಕೆ ವಿರೋಧ : ಕಾರ್ಮಿಕ ಕಾಯ್ದೆಗೂ ವಿರೋಧ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, 12 ಗಂಟೆ ಕೆಲಸ ಮಾಡಲು ಕಾಯ್ದೆ ತರಲು ಮುಂದಾಗಿದ್ದೀರಾ? ಇದಕ್ಕೆ ಹೆಚ್ಚು ಸಂಬಳ ಕೊಡ್ತೀರಾ? ಇಲ್ಲವಾ? ಹೆಚ್ಚು ಕೆಲಸ ಮಾಡಲು ಕಾರ್ಮಿಕರಿಗೆ ದೈಹಿಕ ಶಕ್ತಿ ಇದೆಯಾ? ಇದನ್ನ ಸರ್ಕಾರ ಅರಿತಿದೆಯಾ? ಈ ಕಾಯ್ದೆ ತರಾತುರಿಯಲ್ಲಿ ಯಾಕೆ ತರ್ತೀರಾ? ಯಾರನ್ನೋ ಕಾಪಾಡಲು ಈ ಕಾಯ್ದೆ ತರೋದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಧ್ಯಪ್ರದೇಶ, ಉತ್ತರಪ್ರದೇಶ ಆ್ಯಕ್ಟ್ ಮೇಲೆ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡೋದು ಸರಿಯಲ್ಲ. ಕೈಗಾರಿಕೆಗಳು ಉಳಿಬೇಕು. ಆದರೆ, ಹೀಗೆ ತರಾತುರಿಯಲ್ಲಿ ಕಾಯ್ದೆ ತರುವುದು ಸರಿಯಲ್ಲ. ಸಾರ್ವಜನಿಕ ಚರ್ಚೆಗೆ ಇಡದೇ ತರಾತುರಿಯಲ್ಲಿ ಸುಗ್ರಿವಾಜ್ಞೆ ತರೋದು ಸರಿಯಲ್ಲ. ಕೇಂದ್ರ ಸರ್ಕಾರವನ್ನ ತೃಪ್ತಿ ಮಾಡಲು ಹೀಗೆ ಕಾನೂನು ತರೋದು ಸರಿಯಲ್ಲ. ನೀವು ಕಾನೂನು ತೆರಬೇಕಾದರೆ ಕೂಡಾ ಅಧಿವೇಶನ ಕರೆಯಿರಿ. ಅಧಿವೇಶನದಲ್ಲಿ ಚರ್ಚೆ ಮಾಡೋಣ ಎಂದು ಒತ್ತಾಯಿಸಿದರು. ಈ ಎರಡೂ ಕಾಯ್ದೆಗೆ ಅಂಗೀಕಾರ ನೀಡದಂತೆ ರಾಜ್ಯಪಾಲರಿಗೂ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಮೋದಿ ಭಾಷಣದಲ್ಲಿ ನಿರೀಕ್ಷೆ ಏನೂ ಇಲ್ಲ : ಮೋದಿ ಭಾಷಣದ ಬಗ್ಗೆ ನನಗೇನು ನಿರೀಕ್ಷೆ ಇಲ್ಲ. ಮೋದಿ ಮಾಮೂಲಿ ಭಾಷಣ ಮಾಡುತ್ತಾರೆ. ಜನರು ಮರುಳಾಗುತ್ತಾರೆ ಅಷ್ಟೇ.. ಪಿಎಂ ಕೇರ್ ಫಂಡ್ ಬಗ್ಗೆ ಮಾಹಿತಿ ಕೊಡುವುದಿಲ್ಲ ಎಂದು ಹೇಳುತ್ತಾರೆ. ಇದು ಮೋದಿ ಅವರ ಆಡಳಿತ ಎಂದು ಕಿಡಿಕಾರಿದರು. ಮೋದಿ ಅವರ ಭಾಷಣ ಕೇಳೋಕೆ ಚೆಂದ. ಅದನ್ನು ಕೇಳಿಕೊಂಡು ಸುಮ್ಮನೆ ಇರಬೇಕಷ್ಟೇ.. ಕಳೆದ 6 ವರ್ಷಗಳಿಂದ ಅದನ್ನು ಕೇಳುತ್ತಲೇ ಇದ್ದೇವೆ ಎಂದು ಟೀಕಿಸಿದರು.