ಬೆಂಗಳೂರು: ದೇಶದ ಹಲವಾರು ಸಮಸ್ಯೆಗಳನ್ನು ಒಟ್ಟಾಗಿ ಬಗೆಹರಿಸಿಕೊಳ್ಳಬೇಕು. ಆದರೆ ಅಂತಹ ವಾತಾವರಣ ದೇಶದಲ್ಲಿ ಇಲ್ಲ. ಪ್ರತಿಯೊಂದಕ್ಕೂ ಸಂಘರ್ಷದ ಹಾದಿ ಹಿಡಿಯುತ್ತಿದ್ದೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ 72 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಅಧಿಕಾರದಲ್ಲಿದ್ದಾಗ ಯಾವುದೇ ಸಂಘರ್ಷಕ್ಕೆ ಅವಕಾಶ ಕೊಡಲಿಲ್ಲ. ನಾನು ಸಂದೇಶ ಕೊಡುವುದಕ್ಕೆ ಯಾವುದೇ ಅಧಿಕಾರದಲ್ಲಿ ಇಲ್ಲ. ನಾನು ಸಾಮಾನ್ಯವಾಗಿ ಈ ಸಂದರ್ಭದಲ್ಲಿ ದೆಹಲಿಯಲ್ಲಿ ಇರುತ್ತಿದ್ದೆ. ಆದರೆ ಆರೋಗ್ಯದ ಸಮಸ್ಯೆ ಇರುವ ಕಾರಣದಿಂದ ಇಲ್ಲೇ ನಮ್ಮ ಕಚೇರಿಯಲ್ಲಿ ಆಚರಣೆ ಮಾಡುತ್ತಿದ್ದೇನೆ. ಸ್ವಾತಂತ್ರ್ಯ ಅಥವಾ ಗಣರಾಜ್ಯೋತ್ಸವ ದಿನಾಚರಣೆ ದಿನ ಏನೇ ಕಷ್ಟಗಳಿದ್ದರೂ ನಮ್ಮ ಕಚೇರಿಯಲ್ಲಿ ಆಚರಣೆ ನಡೆಯುತ್ತದೆ ಎಂದರು.
ಮುಂದಿನ ರಾಜ್ಯಸಭೆ, ಲೋಕಸಭಾ ಅಧಿವೇಶನದಲ್ಲಿ ಭಾಗವಹಿಸಲು ಸಂಕಲ್ಪ ಮಾಡಿದ್ದೇನೆ ಎಂದ ದೊಡ್ಡಗೌಡರು, ರೈತರ ಕಾಯ್ದೆ ರಾಜ್ಯಸಭೆಯಲ್ಲಿ ಮಂಡನೆ ಮಾಡಿದ ಸಂದರ್ಭದಲ್ಲಿ ನಾನೂ ಇದ್ದೆ. ಅಂದೇ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಲೋಕಸಭೆಯಲ್ಲಿ ಅವರಿಗೆ ಬಹುಮತ ಇತ್ತು. ಆದರೆ ರಾಜ್ಯಸಭೆಯಲ್ಲಿ ರಾತ್ರಿ ಹತ್ತು ಗಂಟೆ ವೇಳೆಗೆ ಬಿಲ್ ತರಲಾಯಿತು. ಸಂಘರ್ಷದ ಮೂಲಕ ಬಿಲ್ ಪಾಸ್ ಮಾಡಿಕೊಳ್ಳಲು ಮುಂದಾದರು. ಇದು ಪ್ರಜಾಪ್ರಭುತ್ವಕ್ಕೆ ಅವಮಾನ ಎಂದರು.
ಎರಡು ಅಥವಾ ಮೂರು ತಿಂಗಳು ಮಸೂದೆಯನ್ನು ಮುಂದೂಡಿ ಜಂಟಿ ಸಮಿತಿ ರಚಿಸಿ ಆ ನಂತರ ಬಿಲ್ ಪಾಸ್ ಮಾಡಿಕೊಳ್ಳಬಹುದಿತ್ತು. ನಾನೂ ಇದೇ ಸಲಹೆ ಕೊಟ್ಟಿದ್ದೆ. ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ರೈತ ಸಮುದಾಯ ಹಾಗೂ ಸರ್ಕಾರಕ್ಕೆ ಸಂಘರ್ಷ ಏರ್ಪಟ್ಟಿದೆ. ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡಿದ್ದರೂ ಇದನ್ನು ಬಗೆಹರಿಸಲು ಆಗಲಿಲ್ಲ. ಗಣರಾಜ್ಯೋತ್ಸವ ಸಮಾರಂಭ ಮುಗಿದ ಬಳಿಕ ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ಱಲಿ ನಡೆಸುತ್ತಿದ್ದಾರೆ. ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಕೂಡಾ ರೈತರು ಟ್ರ್ಯಾಕ್ಟರ್ ಱಲಿಗೆ ಮುಂದಾಗಿದ್ದಾರೆ ಎಂದು ಹೆಚ್ಡಿಡಿ ಹೇಳಿದರು.
ದೇಶವನ್ನು ಕೋವಿಡ್ 19 ಕಾಡುತ್ತಿದೆ. ನಮ್ಮ ದೇಶದಲ್ಲಿ ಕೂಡಾ ಅನೇಕರು ಮೃತಪಟ್ಟಿದ್ದಾರೆ. ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರೈತರ ಮೆರವಣಿಗೆ ಆರಂಭ
ಹಾಸನ ಜಿಲ್ಲೆಯ ಶಾಸಕರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ಈ ಬಗ್ಗೆ ಸಿಎಂ ಜೊತೆ ನಾನೇ ಮಾತನಾಡಿದ್ದೇನೆ. ಕೊರೊನಾ ಕಾರಣದಿಂದ ಅನುದಾನ ವಿಚಾರದಲ್ಲಿ ವಿಳಂಬ ಆಗಿದೆ. ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಅವರೇ ಮಾತು ಕೊಟ್ಟ ಬಳಿಕ ಪ್ರತಿಭಟನೆ ಮಾಡುವುದು ಸರಿಯಲ್ಲವೆಂದು ಆ ವಿಚಾರವನ್ನು ಕೈ ಬಿಡಲಾಗಿದೆ ಎಂದು ಹೇಳಿದರು.
ಪಕ್ಷದಲ್ಲಿ ಬದಲಾವಣೆ :
ಪಕ್ಷದಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಹೆಚ್.ಡಿ. ಕುಮಾರಸ್ವಾಮಿ ಬಹಳ ಗಂಭೀರವಾಗಿ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಲು ಉದ್ದೇಶಿಸಲಾಗಿದೆ. ಸಭಾಪತಿ, ಉಪ ಸಭಾಪತಿ ಆಯ್ಕೆ ವಿಚಾರವನ್ನು ಪಕ್ಷದ ಇತರ ನಾಯಕರು ನೋಡಿಕೊಳ್ಳುತ್ತಾರೆ. ನಾಳೆ ಅಥವಾ ನಾಡಿದ್ದು ಸಭೆ ಸೇರಿ ಅದರ ಬಗ್ಗೆ ನಿರ್ಧಾರ ಮಾಡುತ್ತಾರೆ. ನಾನು ಆ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ದಿನೇದಿನೇ ಏರುತ್ತಿದೆ. ಇವೆಲ್ಲವುಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಮಾಜಿ ಪ್ರಧಾನಿ ತಿಳಿಸಿದರು.
ಜೆಡಿಎಸ್ನ ರಾಜ್ಯ ಕಾರ್ಯಾಧ್ಯಕ್ಷ ಎಂ.ಎಸ್. ನಾರಾಯಣರಾವ್ , ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.