ಬೆಂಗಳೂರು: ಕೆಲವು ನ್ಯಾಯಮೂರ್ತಿಗಳು ಹಾಗೂ ವಕೀಲರನ್ನು ಕೊಲ್ಲಲು ನಿರ್ಧರಿಸಿದ್ದೇನೆ ಎಂದು ಪತ್ರ ಬರೆದಿದ್ದ 72 ವರ್ಷದ ವೃದ್ಧನಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ನಗರದ ಜೆ.ಪಿ.ನಗರ ನಿವಾಸಿ ಎಸ್.ವಿ.ಶ್ರೀನಿವಾಸರಾವ್ ಕಳೆದ ಜನವರಿ 29ರಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ಪತ್ರ ಬರೆದಿದ್ದರು. ಪತ್ರದಲ್ಲಿ ರಾಜ್ಯ ಹೈಕೋರ್ಟ್ನ 28 ಭ್ರಷ್ಟ ನ್ಯಾಯಮೂರ್ತಿಗಳ ಪೈಕಿ ಒಬ್ಬರನ್ನು, ಸುಪ್ರೀಂ ಕೋರ್ಟ್ನ ಓರ್ವ ನ್ಯಾಯಮೂರ್ತಿಯನ್ನು ಮತ್ತು ಇಬ್ಬರು ಭ್ರಷ್ಟ ವಕೀಲರನ್ನು ಕೊಲ್ಲಲು ನಿರ್ಧರಿಸಿರುವುದಾಗಿ ತಿಳಿಸಿದ್ದರು.
ಈ ಪತ್ರದ ಮೇರೆಗೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಆರೋಪಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮಾ. 1ಕ್ಕೆ ಮುಂದೂಡಿದೆ.
ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿರುವ ಪೀಠ, ಯಾವುದೇ ವ್ಯಕ್ತಿಗೆ ಆಧಾರ ರಹಿತವಾಗಿ ನ್ಯಾಯಮೂರ್ತಿಗಳ ವಿರುದ್ಧ ಆರೋಪ ಮಾಡುವ, ಅವಮಾನಿಸುವ, ಬೆದರಿಸುವ ಹಾಗೂ ಪ್ರಚೋದಿಸುವ ಅಧಿಕಾರವಾಗಲಿ, ಅವಕಾಶವಾಗಲಿ ಇಲ್ಲ. ಹೀಗಾಗಿ ಪತ್ರ ಬರೆದಿರುವ ಆರೋಪಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅದರಂತೆ ನ್ಯಾಯಾಂಗ ನಿಂದನಾ ಕ್ರಮವನ್ನು ಜರುಗಿಸಲು ಕರ್ನಾಟಕ ಹೈಕೋರ್ಟ್ (ಕೋರ್ಟ್ ನ್ಯಾಯಾಂಗ ನಿಂದನೆ) ನಿಯಮ 1981ರ ನಿಯಮ-8ರ ಪ್ರಕಾರ ಆರೋಪಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದಿದೆ.
ಆರೋಪಿಯು ಪತ್ರದಲ್ಲಿ ನ್ಯಾಯಮೂರ್ತಿಗಳ ಮೇಲೆ ಅನಗತ್ಯ ಹಾಗೂ ಆಧಾರದ ರಹಿತ ಆರೋಪಗಳನ್ನು ಮಾಡಿದ್ದಾರೆ. ಇದು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಾಡಿರುವ ಹಸ್ತಕ್ಷೇಪವಾಗಿದೆ. ಅವರು ಮಾಡಿರುವ ಆರೋಪಗಳು ಕೋರ್ಟ್ ಕಲಾಪದ ಮೇಲೂ ಪರಿಣಾಮ ಬೀರಲಿವೆ. ವಕೀಲರೂ ಸಹ ನ್ಯಾಯಾಂಗ ವ್ಯವಸ್ಥೆಯ ಒಂದು ಭಾಗವಾಗಿದ್ದು, ಅವರ ಮೇಲೆ ಅನಗತ್ಯ ಆರೋಪಗಳನ್ನು ಮಾಡಿರುವುದು ಸರಿಯಲ್ಲ. ಆರೋಪಿ ಹಿಂದೆಯೂ ಇದೇ ರೀತಿ ಆರೋಪಗಳನ್ನು ಮಾಡಿ, ಕ್ಷಮೆ ಕೋರಿದ್ದರು. ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಆರೋಪಗಳನ್ನು ಕೈಬಿಡಲಾಗಿತ್ತು. ಆದರೆ ಇದೀಗ ಮತ್ತೆ ಪತ್ರ ಬರೆದಿರುವುದು ಸಮ್ಮತವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.