ಬೆಂಗಳೂರು: ಮನೆ ಮನೆ ತಿರಂಗಾ ಅಭಿಯಾನದ ಪ್ರಯುಕ್ತ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಸಚಿವರುಗಳು ಇಂದು ಬೆಳಗ್ಗೆ ತಮ್ಮ ನಿವಾಸದ ಮುಂದೆ ತ್ರಿವರ್ಣ ಧ್ವಜ ಹಾರಿಸಿದರು.
ಸಿಎಂ ಬೊಮ್ಮಾಯಿ ಆರ್.ಟಿ.ನಗರದ ತಮ್ಮ ನಿವಾಸದ ಎದುರು ತ್ರಿವರ್ಣ ಧ್ವಜವನ್ನು ಹಾರಿಸಿದರು. ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿದರು. ಆ.13 ರಿಂದ ಆಗಸ್ಟ್ 15ರವರೆಗೆ ಪ್ರಧಾನಿ ಮೋದಿ ಕರೆಯಂತೆ ರಾಜ್ಯದಲ್ಲಿ ಒಂದು ಕೋಟಿ ತಿರಂಗಾ ಹಾರಿಸುವ ಗುರಿ ಹೊಂದಲಾಗಿದೆ. ಅದರಂತೆ ಇಂದು ಬೆಳಗ್ಗೆ ಸಿಎಂ ಸೇರಿದಂತೆ ಬಿಜೆಪಿ ನಾಯಕರು ತಮ್ಮ ಮನೆ ಮುಂದೆ ರಾಷ್ಟ್ರಧ್ವಜ ಹಾರಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಕಾವೇರಿ ನಿವಾಸದ ಮುಂದೆ ರಾಷ್ಟ್ರಧ್ವಜ ಹಾರಿಸಿದರೆ, ಸಚಿವ ಆರ್.ಅಶೋಕ್ ಜಾಲಹಳ್ಳಿಯ ಸ್ವಗೃಹದಲ್ಲಿ ಧ್ವಜಾರೋಹಣ ಮಾಡಿ ಸಿಹಿ ವಿತರಿಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ವಿ.ಸೋಮಣ್ಣ, ಬೈರತಿ ಬಸವರಾಜ್, ಅಶ್ವತ್ಥ ನಾರಾಯಣ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಸೇರಿದಂತೆ ಸಚಿವರು ತಮ್ಮ ಮನೆ ಮುಂದೆ ತ್ರಿವರ್ಣ ಧ್ವಜ ಹಾರಿಸಿದರು.
1.8 ಕೋಟಿ ತ್ರಿವರ್ಣ ಧ್ವಜ ವಿತರಣೆ: ತಮ್ಮ ಮನೆ ಮುಂದೆ ರಾಷ್ಟ್ರಧ್ವಜ ಹಾರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದಿನಿಂದ ದೇಶದೆಲ್ಲೆಡೆ ಹರ್ ಘರ್ ತಿರಂಗಾ ನಡೀತಿದೆ. ರಾಜ್ಯದಲ್ಲಿ ಹರ್ ಘರ್ ತಿರಂಗಾ ಯಶಸ್ವಿಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಧ್ವಜ ವಿತರಣೆ ಮಾಡಲಾಗಿದೆ. ಈಗಾಗಲೇ 1 ಕೋಟಿ 8 ಲಕ್ಷ ಧ್ವಜಗಳನ್ನು ವಿತರಿಸಿದ್ದೇವೆ. ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚು ಕಡೆ ತಿರಂಗಾ ಹಾರಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ, ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಸಮಾವೇಶ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಮುಂಚೆ ದೊಡ್ಡಬಳ್ಳಾಪುರದಲ್ಲಿ ಸಮಾವೇಶ ರದ್ದು ಮಾಡಿದ್ದೆವು. ಆದರೆ, ಆ ಭಾಗದ ಜನ ಕಳೆದ ಹತ್ತು ಹನ್ನೆರಡು ದಿನಗಳಿಂದ ಒತ್ತಡ ಹಾಕುತ್ತಿದ್ದಾರೆ. ದೊಡ್ಡಬಳ್ಳಾಪುರದಲ್ಲೇ ಸಮಾವೇಶ ನಡೆಸಲು ಜನರ ಒತ್ತಡವಿತ್ತು. ಈ ಹಿನ್ನೆಲೆಯಲ್ಲಿ ಸಮಾವೇಶ ಮಾಡಲು ನಿರ್ಧರಿಸಿದ್ದೇವೆ. ಕೇಂದ್ರದ ನಾಯಕರಿಗೆ ಆಹ್ವಾನ ಕೊಡುವ ಬಗ್ಗೆ ಇವತ್ತು ನಿರ್ಧರಿಸ್ತೇವೆ ಎಂದರು.
ಇದನ್ನೂ ಓದಿ: ಅದ್ಧೂರಿ ಅಮೃತ ಮಹೋತ್ಸವ.. 35 ಗ್ರಾಂ ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ ಮಾಡಿದ ಮಿಲಿಂದ್