ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಹಾನಗಲ್ ಕ್ಷೇತ್ರದ ಸಂಧಾನ ಸಭೆ ಯಶಸ್ವಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿತ್ತು. ಮೂರನೇ ಪ್ರಯತ್ನವಾಗಿ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಂಧಾನ ಸಭೆ ಸಫಲವಾಗಿದೆ. ಶ್ರೀನಿವಾಸ್ ಮಾನೆ ಅಭ್ಯರ್ಥಿಯಾಗಿ ಘೋಷಣೆ ಯಾಗುವುದು ಬಹುತೇಕ ಖಚಿತವಾಗಿದೆ.
ಶ್ರೀನಿವಾಸ್ ಮಾನೆ ಅಭ್ಯರ್ಥಿಯಾದರೂ ಕೆಲಸ ಮಾಡುವೆ ಎಂದ ಮನೋಹರ್ ತಹಶೀಲ್ದಾರ್ ಪರೋಕ್ಷವಾಗಿ ಮಾನೆಗೆ ಟಿಕೆಟ್ ಸಿಗುವ ಸೂಚನೆ ನೀಡಿದ್ದಾರೆ. ಮೊನ್ನೆ ಕೊಟ್ಟಿದ್ದ ಖಡಕ್ ಹೇಳಿಕೆಗೆ ನಿನ್ನೆ ವ್ಯತಿರಿಕ್ತ ಹೇಳಿಕೆ ಕೊಟ್ಟ ತಹಶೀಲ್ದಾರ್, ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡ್ತೀನಿ ಎಂದಿದ್ದಾರೆ. ಒಬ್ಬರಿಗೆ ಟಿಕೆಟ್ ಇನ್ನೊಬ್ಬರಿಗೆ ಪರ್ಯಾಯ ಸ್ಥಾನಮಾನ ಸೂತ್ರದ ಅಡಿ ನಡೆದ ಮಹತ್ವದ ಮಾತುಕತೆಯಲ್ಲಿ ಸಿದ್ದರಾಮಯ್ಯ ತೀರ್ಮಾನಕ್ಕೆ ಸೈ ಎಂದ ತಹಶೀಲ್ದಾರ್ ತಮಗೆ ಉಪಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದರು ಬೇಸರಗೊಳ್ಳದೆ ತೆರಳಿದ್ದಾರೆ.
ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜತೆ ಕಾರ್ಯಾಧ್ಯಕ್ಷ ಸಲೀಂ ಅಹಮದ್, ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಮನೋಹರ್ ತಹಶೀಲ್ದಾರ್, ಶಿವಣ್ಣನವರ್, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಮತ್ತಿತರರು ಭಾಗವಹಿಸಿದ್ದರು.
ಪರ್ಯಾಯ ಸ್ಥಾನಮಾನಕ್ಕೆ ಒಪ್ಪಿದ ಮನೋಹರ್ ತಹಶೀಲ್ದಾರ್
ಈ ವೇಳೆ ಮಾತನಾಡಿದ ಮನೋಹರ್ ತಹಶೀಲ್ದಾರ್, ನಾನು ನಿನ್ನೆ ಕೆಲ ಹೇಳಿಕೆಗಳನ್ನು ಕೊಟ್ಟಿದ್ದೆ, ಆದರೆ ಇಂದಿನ ಸಭೆಯಲ್ಲಿ ನಮ್ಮ ನಾಯಕರೆಲ್ಲ ಒಗ್ಗೂಡಿ ತೀರ್ಮಾನ ಮಾಡಿದ್ದಾರೆ. ಒಬ್ಬರಿಗೆ ಹಾನಗಲ್ ಟಿಕೆಟ್, ಇನ್ನೊಬ್ಬರಿಗೆ ಪರ್ಯಾಯ ಸ್ಥಾನಮಾನ ಎಂದಿದ್ದಾರೆ, ಇದನ್ನು ಒಪ್ಪಿದ್ದೇನೆ ಎಂದಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಒಂದಾಗಿ ತೀರ್ಮಾನಿಸಿದ್ದೇವೆ. ಎಲ್ಲರೂ ಸೇರಿ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಇಡೀ ಜಿಲ್ಲೆಯ ನಾಯಕರು ಒಟ್ಟಾಗಿ ಸಹಕರಿಸುತ್ತಾರೆ. ಯಾರಿಗೆ ಟಿಕೆಟ್ ಸಿಕ್ಕರೂ ಉಳಿದವರು ಅವರಿಗೆ ಸಹಕಾರ ನೀಡುತ್ತಾರೆ. ಎಲ್ಲರಿಗೂ ರಾಜಕೀಯವಾಗಿ ನೆಲೆ ಕಲ್ಪಿಸಬೇಕೆಂಬ ಮನವಿ ಇದೆ ಅದನ್ನು ಪಕ್ಷ ಈಡೇರಿಸಲಿದೆ ಎಂದರು.
'ಟಿಕೆಟ್ ಹಂಚಿಕೆ ವಿಚಾರದಲ್ಲಿನ ಗೊಂದಲ ಮಾಧ್ಯಮಗಳ ಸೃಷ್ಟಿ':
ಸಭೆಗೂ ಮುನ್ನ ಮಾತನಾಡಿದ ಡಿಕೆಶಿ, ಹಾನಗಲ್ ಉಪ ಚುನಾವಣೆ ಸಂಬಂಧ ಕಳೆದ ಎರಡು ದಿನಗಳಿಂದ ಪಕ್ಷದ ನಾಯಕರ ಜತೆ ಚರ್ಚೆ ಮಾಡುತ್ತಿದ್ದು, ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು. ಟಿಕೆಟ್ ಹಂಚಿಕೆ ವಿಚಾರವಾಗಿ ಪಕ್ಷದಲ್ಲಿ ಗೊಂದಲ ಮೂಡಿದೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಗೊಂದಲ ಇದೆ ಎಂದು ನಿಮಗೆ ಯಾರಾದರೂ ಹೇಳೀದ್ದಾರಾ ಎಂದು ಪ್ರಶ್ನಿಸಿದರು.
ಟಿಕೆಟ್ ಹಂಚಿಕೆ ವಿಚಾರವಾಗಿ ಸ್ಥಳೀಯ ನಾಯಕರು, ಪಕ್ಷದ ಹಿರಿಯ ನಾಯಕರ ಜತೆ ನಿರಂತರ ಚರ್ಚೆ ನಡೆಯುತ್ತಿದೆ. ಸ್ಥಳೀಯ ನಾಯಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕು ಎಂಬ ಕಾರಣಕ್ಕೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಭೆ ಮಾಡುತ್ತಿದ್ದೇವೆ. ಟಿಕೆಟ್ ಯಾರಿಗೆ ಎಂದು ಅಂತಿಮ ಮಾಡುವುದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಹೈಕಮಾಂಡ್. ನಮ್ಮ ಕೆಲಸ ಏನಿದ್ದರೂ ಹೆಸರು ಶಿಫಾರಸ್ಸು ಮಾಡುವುದಷ್ಟೇ ಎಂದರು.
'ಮತದಾರರು ಉತ್ತರ ನೀಡುತ್ತಾರೆ':
ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಸಂಜಯ್ ಪಾಟೀಲ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, ಆ ಕ್ಷೇತ್ರದ ಜನ ಯಾರಿಗೆ ಎಷ್ಟು ಮತ ನೀಡಿದ್ದಾರೆ ಎಂಬುದನ್ನು ನೋಡಿಕೊಳ್ಳಲಿ. ಮುಂದೆಯೂ ಜನರೇ ಉತ್ತರ ನೀಡುತ್ತಾರೆ ಎಂದರು.