ಬೆಂಗಳೂರು: ಬಿಜೆಪಿ ನಾಯಕರಿಗೆ ದೊಡ್ಡ ಹುಲ್ಲುಗಾವಲು ಸಿಕ್ಕಿದೆ, ಚೆನ್ನಾಗಿ ಮೇಯುತ್ತಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೆರೆ-ಕೋಡಿಗಳನ್ನು ನುಂಗಿದವರನ್ನು ಖಾಲಿ ಮಾಡಿಸುತ್ತೇವೆ ಹಾಗೂ ಆ ಕೆರೆಗಳಿಗೆ ಪೂರ್ವ ವೈಭವ ತಂದು ನದಿ ಜಲವನ್ನು ತುಂಬಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.
ನಗರದ ಮಹಾಲಕ್ಷ್ಮೀ ಲೇಔಟ್ನಲ್ಲಿ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡದೇ ಇದ್ದಿದ್ದರೆ ಎಂಟು ಸಾವಿರ ಕೋಟಿ ರೂ. ಕಮಿಷನ್ ಸಿಗುತ್ತಿತ್ತು. ನಾನು ಬೆಂಗಳೂರಿನಲ್ಲಿ ಚರಂಡಿ ಕ್ಲೀನ್ ಮಾಡುವುದಕ್ಕೆ, ವೈಟ್ ಟ್ಯಾಪಿಂಗ್ ಮಾಡುವುದಕ್ಕೆ ಅದೇ ಹಣವನ್ನು ಕೊಟ್ಟು ಕಮಿಷನ್ ಪಡೆದಿದ್ದರೆ ಬಿಜೆಪಿ, ಕಾಂಗ್ರೆಸ್ಗಿಂತ ಚೆನ್ನಾಗಿ ಚುನಾವಣೆ ಮಾಡಬಹುದಿತ್ತು. ನಮ್ಮ ಶಾಸಕರಿಗೆ ಆ ಹಣವನ್ನು ಹಂಚಿ, ಕೊಳ್ಳೆ ಹೊಡೆಯಬಹುದಿತ್ತು. ಈಗ ಬಿಜೆಪಿಯವರು 40% ಕಮಿಷನ್ ಹೊಡೆಯುತ್ತಿದ್ದಾರೆ, ಅವರಿಗೆ ನಾಚಿಕೆ ಆಗಬೇಕು ಎಂದು ಹೇಳಿದರು.
ಗೋಪಾಲಯ್ಯ ವಿರುದ್ಧ ಟೀಕಾಪ್ರಹಾರ: ಈ ಕ್ಷೇತ್ರದಲ್ಲಿ ಒಬ್ಬ ಮಹಾನುಭಾವ ಇದ್ದ. ಆತನಿಗೆ ಎರಡು ಬಾರಿ ಟಿಕೆಟ್ ಕೊಟ್ಟೆ. ನನಗೆ ಟೋಪಿ ಹಾಕಿ ಹೋದ. ಸ್ವಾಮೀಜಿಯೊಬ್ಬರು 'ಆತ ಏನೋ ತಪ್ಪು ಮಾಡಿಕೊಂಡಿದ್ದಾನೆ, ಒಂದು ಬಾರಿ ಟಿಕೆಟ್ ಕೊಡಿ' ಎಂದರು. ಅವರ ಸಲಹೆ ಮೇರೆಗೆ ಟಿಕೆಟ್ ಕೊಟ್ಟೆ. ಆನಂತರ ಈ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ಕೊಟ್ಟೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಅವರ ಹೆಸರು ಹೇಳದೇ ಟೀಕಾಪ್ರಹಾರ ನಡೆಸಿದರು.
ಅಬಕಾರಿ ಇಲಾಖೆಯಲ್ಲಿ ಟಾರ್ಗೆಟ್ ಹಾಕಿಕೊಂಡು ಲೂಟಿ ಮಾಡಲಾಗುತ್ತಿದೆ. ವೈನ್ ಸ್ಟೋರ್ಗಳಿಂದ ವಸೂಲಿ ಮಾಡಲಾಗುತ್ತಿದೆ. ಪಾಪದ ಹಣವನ್ನು ಲೂಟಿ ಮಾಡಿ ಮೆರೆಯುತ್ತಿದ್ದಾರೆ. ಅದೇ ಹಣವನ್ನು ಮುಂದಿನ ಚುನಾವಣೆಯಲ್ಲಿ ಮತದಾರರಿಗೆ ಹಂಚುತ್ತಾರೆ ಎಂದು ದೂರಿದರು.
ಬೆಂಗಳೂರು ನಗರದ ಮೂವರು ಶಾಸಕರು ಪ್ರತಿ ಬಾರಿಯೂ ಬಿಡಿಎ ಸಭೆಗೆ ಹೋದರೆ ಮೂಟೆಗಳಲ್ಲಿ ಹಣ ತುಂಬಿಕೊಂಡು ಹೋಗುತ್ತಿದ್ದರಂತೆ. ಆರ್.ಆರ್.ನಗರದವರು, ಯಶವಂತಪುರದವರು ಮತ್ತು ಕೆ.ಆರ್.ಪುರಂ ನವರು ಎಲ್ಲಾ ಸಭೆಗಳಲ್ಲೂ ಭರ್ಜರಿ ಹಣ ಮಾಡಿಕೊಳ್ಳುತ್ತಿದ್ದರು. ಸಿದ್ದರಾಮಯ್ಯ ಕಾಲದಲ್ಲಿ ಬಿಡಿಎ ಮೀಟಿಂಗ್ಗಳಲ್ಲಿ 9 ಕೋಟಿ ಎತ್ತಿಕೊಂಡು ಹೋಗಿದ್ದರಂತೆ. ಆ ಮಾತನ್ನು ಅಧಿಕಾರಿಗಳೇ ಹೇಳುತ್ತಾರೆ ಎಂದು ಪರೋಕ್ಷವಾಗಿ ಎಸ್ಬಿಎಂ ಟೀಂ ವಿರುದ್ಧ ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ರಾಜ್ಯದ ನೀರಾವರಿ ಯೋಜನೆಗಳನ್ನು ಬದ್ಧತೆಯಿಂದ ಜಾರಿ ಮಾಡುವುದು ನಮ್ಮ ಗುರಿ. ನೆನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಮೆಟ್ರೋ, ರೈಲು, ಐಟಿಗೆ ಉತ್ತೇಜನ, 9 ಟಿಎಂಸಿ ಕುಡಿಯುವ ನೀರು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟರು ಎಂದು ಹೇಳಿದರು.
ಕೆರೆ ನುಂಗಿದವರನ್ನು ಖಾಲಿ ಮಾಡಿಸುತ್ತೇನೆ: ಬೆಂಗಳೂರಿನಲ್ಲಿ ಶಿಕ್ಷಣ ದುಬಾರಿಯಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಕೆಜಿಯಿಂದ 12 ನೇ ತರಗತಿಯವರೆಗೂ ಉಚಿತ ಶಿಕ್ಷಣ ಕೊಡುತ್ತೇನೆ. ಜನತೆ ಹಾಗೂ ನಗರದ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತುಕೊಟ್ಟು, ಜಲಮೂಲಗಳನ್ನು ರಕ್ಷಣೆ ಮಾಡುತ್ತೇವೆ. ಕೆರೆ ಹಾಗೂ ಕೆರೆ ಕೋಡಿಗಳನ್ನು ನುಂಗಿದವರನ್ನು ಖಾಲಿ ಮಾಡಿಸುತ್ತೇನೆ. ಯಾರ ಮನೆ ಬಾಗಿಲಿಗೂ ನನ್ನನ್ನೂ ಕಳಿಸಬೇಡಿ, ನನ್ನ ಮನೆ ಬಾಗಿಲಿಗೂ ಯಾರು ಬರುವುದಕ್ಕೆ ಬಿಡಬೇಡಿ. ಸ್ವತಂತ್ರ್ಯ ಸರ್ಕಾರ ನೀಡಿ. ಇದು ನನ್ನ ಕೊನೆ ಹೋರಾಟ, ಒಂದೇ ಒಂದು ಅವಕಾಶ ಕೊಡಿ ಎಂದು ಅವರು ಮನವಿ ಮಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಬಿಜೆಪಿ ಬಿಬಿಎಂಪಿ ಚುನಾವಣೆ ಮಾಡಲ್ಲ. ಅವರಿಗೆ ಅಷ್ಟು ಧೈರ್ಯ ಇಲ್ಲ. ನ್ಯಾಯಾಲಯ ಆದೇಶ ಮಾಡಿದೆ. ಆದರೂ ಅವರು ಕೋರ್ಟ್ ಆದೇಶವನ್ನು ಪಾಲಿಸುತ್ತಾರೆ ಎಂಬ ನಂಬಿಕೆ ಇಲ್ಲ. ಮಹಾಲಕ್ಷ್ಮೀ ಬಡಾವಣೆಯಲ್ಲಿ ಈ ಬಾರಿ ಗೋಪಾಲಯ್ಯಗೆ ಬಾರಿ ದೊಡ್ಡ ಫೈಟ್ ಇದೆ. ನಮ್ಮ ಪಕ್ಷ ಬಲವಾದ ಪೈಪೋಟಿ ಕೊಡುತ್ತದೆ ಎಂದರು.
ಇದನ್ನೂ ಓದಿ: ವರ್ಗಾವಣೆ ಆದ್ರೂ ಕರ್ತವ್ಯಕ್ಕೆ ಬಾರದ 38 ಇನ್ಸ್ಪೆಕ್ಟರ್ಸ್; ಡಿಜಿ ಕಚೇರಿಯಿಂದ ಎಚ್ಚರಿಕೆ ನೋಟಿಸ್