ಬೆಂಗಳೂರು: ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ದಿಗ್ಬ್ರಮೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
![ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್](https://etvbharatimages.akamaized.net/etvbharat/prod-images/6933180_collage.jpg)
ವ್ಯವಸ್ಥೆಯ ತಲ್ಲಣಗಳಿಗೆ ಮಿಡಿಯುತ್ತಿದ್ದ ಜೀವ ಕಮರಿ ಹೋದಂತಾಗಿದೆ ಎಂದು ಹೆಚ್ಡಿಕೆ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ. ಹಿಂದೂ ಪರ ಸಂಘಟನೆಗಳ ಮೂಲಕ ಗುರುತಿಸಿಕೊಂಡಿದ್ದ ಮಹೇಂದ್ರ ಕುಮಾರ್ ಇದ್ದಕ್ಕಿದ್ದಂತೆ ಬದಲಾಗಿ ಜೆಡಿಎಸ್ ಸೇರ್ಪಡೆಯಾಗಿದ್ದರು. ನನ್ನೊಂದಿಗೆ ಮುಕ್ತವಾಗಿ ಸಮಾಜದ ತಲ್ಲಣಗಳ ಬಗ್ಗೆ ಚರ್ಚಿಸುತ್ತಿದ್ದರು. ಆನಂತರ ಪಕ್ಷ ರಾಜಕೀಯದಿಂದ ದೂರ ಸರಿದ ಅವರು, ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಪ್ರಗತಿಪರ ಚಿಂತಕ ಗುಣವನ್ನು ಬಿಡಲೇ ಇಲ್ಲ. ಆದರೆ ಸಿದ್ಧಾಂತಗಳು ಬದಲಾಗಿದ್ದನ್ನು ನಾನು ಹತ್ತಿರದಿಂದ ಕಂಡಿದ್ದೆ ಎಂದಿದ್ದಾರೆ.
'ನಮ್ಮ ಧ್ವನಿ' ಸಂಘಟನೆ ಹುಟ್ಟು ಹಾಕಿದ್ದ ಮಹೇಂದ್ರ ಕುಮಾರ್, ಈ ಮೂಲಕ ರಾಜ್ಯಾದ್ಯಂತ ಜೀವಪರ ನಿಲುವುಗಳನ್ನು ಜಾಗೃತಗೊಳಿಸುವ ಕ್ರಿಯೆಯಲ್ಲಿ ಸಕ್ರಿಯರಾಗಿದ್ದರು. ಅಕಾಲಿಕವಾಗಿ ಸಾವನ್ನಪ್ಪಿದ ಮಹೇಂದ್ರ ಕುಮಾರ್ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರಿಗೆ ಭಗವಂತ ಕರುಣಿಸಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮೂಲಕ ಹೆಚ್ಡಿಕೆ ಪ್ರಾರ್ಥಿಸಿದ್ದಾರೆ.