ಬೆಂಗಳೂರು: ಕೇಂದ್ರದ ಸರ್ಕಾರದ ಇತ್ತೀಚಿನ ನಿರ್ಧಾರಗಳು ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ತಂದಿವೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಗುಡುಗಿದ್ದಾರೆ.
ನಗರದ ಜೆ.ಪಿ. ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿ, ಕೇಂದ್ರದ ಸರಕಾರದ ಇತ್ತೀಚಿನ ನಿರ್ಧಾರಗಳು ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ತಂದಿವೆ. ಸಿಎಎ ವಿರುದ್ಧ ದೇಶದ ಜನ ಹೋರಾಟ ನಡೆಸುತ್ತಿದ್ದಾರೆ. ಕಾಯ್ದೆ ಜಾರಿ ಬೇಡ ಎಂದು ಒತ್ತಾಯಗಳು ಕೇಳಿ ಬರುತ್ತಿವೆ, ಕೆಲವು ರಾಜ್ಯಗಳು ಜಾರಿ ಮಾಡದಿರಲು ನಿರ್ಧರಿಸಿವೆ. ಆದರೆ ಸಿಎಎ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ ಎಂದು ಗುಡುಗಿದರು.
ನಾವು ಗಾಂಧೀಜಿಯವರ ಮಾರ್ಗದಲ್ಲಿ ಶಾಂತಿಯುತ ಹೋರಾಟ ನಡೆಸುತ್ತೇವೆ. ಸಿಎಎ ಸಂಬಂಧ ಕೇಂದ್ರ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಲಿ. ಪ್ರಧಾನಿ ಮೋದಿ, ಅಮಿತ್ ಶಾ ಇವರ ಅಜೆಂಡಾ ಭಾರತವನ್ನು ಹಿಂದೂ ರಾಷ್ಟ್ರ ಮಾಡೋದು. ಈ ಹಿಂದೆ ಬಿಜೆಪಿಯ ಹಲವರು ಹಿಂದೂ ರಾಷ್ಟ್ರ ಮಾಡಲು ಪ್ರಯತ್ನಿಸಿದ್ದರು. ಬಿಜೆಪಿಯ ಈ ಉದ್ದೇಶ ಈಡೇರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ತಮ್ಮ ವಿರುದ್ಧ ಕೊಲೆ ಸಂಚು ಎಂಬ ಎಚ್.ಡಿ.ಕೆ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಲು ದೇವೇಗೌಡರು ನಿರಾಕರಿಸಿದರು. ಅದನ್ನು ಕುಮಾರಸ್ವಾಮಿ ಅವರಿಗೇ ಕೇಳಿ ಎಂದು ತಿಳಿಸಿದರು.