ಬೆಂಗಳೂರು : ಪಾಲಿಕೆಯ ಕಸದ ಲಾರಿಯಿಂದ ಸರಣಿ ಅಪಘಾತಗಳು ಆಗುತ್ತಿವೆ. ಪಾಲಿಕೆಯ ಗೈಡ್‌ಲೈನ್ಸ್ ಅನ್ನು ಚಾಲಕರು ಗಾಳಿಗೆ ತೂರಿದ್ದಾರಾ? ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದೇ ತಿಂಗಳಿನಲ್ಲಿ ಕಸದ ಲಾರಿಯಿಂದ ಮೂರು ಅಪಘಾತಗಳಾಗಿವೆ. ಹಾಗಾಗಿ, ಕಾಂಪ್ಯಾಕ್ಟರ್ಗಳು ಇನ್ಮುಂದೆ ರಸ್ತೆಗಿಳಿಯುವ ಮುನ್ನ ಕೆಲ ಕಡ್ಡಾಯ ನಿಯಮಗಳನ್ನು ಪಾಲಿಸಬೇಕೆಂದು ಪಾಲಿಕೆಯಿಂದ ಖಡಕ್ ಆದೇಶ ಹೊರಡಿಸಲಾಗಿದೆ.
ಎಲ್ಲಾ ಕಾಂಪ್ಯಾಕ್ಟರ್/ಟಿಪ್ಪರ್ ವಾಹನಗಳಿಗೂ ಫಿಟ್ನೆಸ್ ಸರ್ಟಿಫಿಕೇಟ್ ಇರಬೇಕು. ಹಾಗೇ ಇದರ ತಪಾಸಣೆಯನ್ನು ಇನ್ಮುಂದೆ ಬಿಬಿಎಂಪಿ ಮಾರ್ಷಲ್ಸ್ ಕೈಗೊಳ್ಳಬೇಕು. ಎಲ್ಲಾ ಕಾಂಪ್ಯಾಕ್ಟರ್, ಟಿಪ್ಪರ್ಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಿರುವ ಕುರಿತು ಸಾರಿಗೆ ಪ್ರಾಧಿಕಾರ ದೃಢೀಕರಿಸಬೇಕು. ಈ ಬಗ್ಗೆ ಕಾರ್ಯಪಾಲಕ ಅಭಿಯಂತರರು ಹಾಗೂ ಟ್ರಾಫಿಕ್ ಪೊಲೀಸರೊಂದಿಗೆ ಚೆಕ್ಕಿಂಗ್ ಕೈಗೊಂಡು ವಾಹನ ಸಂಚಾರ ಯೋಗ್ಯವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.
ಪ್ರಮುಖವಾಗಿ ಕಸದ ಲಾರಿಗಳು ಫ್ಲೈ ಓವರ್ಗಳ ಅಕ್ಕಪಕ್ಕದಲ್ಲಿ ಬಹಳ ವೇಗವಾಗಿ ಸಂಚರಿಸುತ್ತವೆ. ಇಂತಹ ಜಾಗದಲ್ಲಿ ಮಾರ್ಗ ಮಧ್ಯೆಯ ರಸ್ತೆ ವಿಭಜಕದ ಎತ್ತರ ಏರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವೇಗದ ಮಿತಿಗೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ರಸ್ತೆ ಕಾಮಗಾರಿಗೆ ಮನವಿ ಮಾಡಿದ್ದಕ್ಕೆ ಪಟಾರ್ ಎಂದು ಕೆನ್ನೆಗೆ ಭಾರಿಸಿದ ಶಾಸಕ
ವಾಹನಗಳ ನಿರ್ವಹಣೆಗೆ ಪಾಲಿಕೆ ಹಣ ನೀಡುತ್ತಿದೆ. ಇನ್ನು ಸುಸ್ಥಿತಿಯಲ್ಲಿರುವ ವಾಹನಗಳನ್ನು ಬಳಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಈಗಾಗಲೇ ಗುತ್ತಿಗೆದಾರರ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಟೆಂಡರ್ ಕರೆದು ಹೊಸ ವಾಹನಗಳ ಸೇರ್ಪಡೆಗೂ ಪಾಲಿಕೆ ಚಿಂತನೆ ನಡೆಸಿದೆ. ಸುಮಾರು 5-6 ವರ್ಷ ಅನುಭವ ಇರುವವರನ್ನು ಲಾರಿ ಚಾಲನೆ ಮಾಡಲು ನೇಮಕ ಮಾಡುವಂತೆ ಸೂಚಿಸಲಾಗಿದೆ. ಅನುಭವಿ ಚಾಲಕರು ಇರುವಂತೆ ನೋಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.