ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಕಾರ್ಯನಿರ್ವಹಣೆ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನುಮತಿ ಇಲ್ಲದೆ ಫೋಟೋ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಸರ್ಕಾರ ಒಂದೇ ದಿನದಲ್ಲಿ ಹಿಂದಕ್ಕೆ ಪಡೆದು ಶುಕ್ರವಾರ ತಡರಾತ್ರಿ ಆದೇಶ ಹೊರಡಿಸಿದೆ.
![Photo ban order withdraw](https://etvbharatimages.akamaized.net/etvbharat/prod-images/15836799_ts.jpg)
ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ರಾಜ್ಯದಲ್ಲಿನ ಗ್ರಾಮ ಪಂಚಾಯತ್ನಿಂದ ಹಿಡಿದು ರಾಜಧಾನಿ ಹಂತದವರೆಗೂ ಬರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕೆಲಸದ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಯ ಅನುಮತಿಯಿಲ್ಲದೇ ಫೋಟೋ ತಗೆಯುವಂತಿಲ್ಲ ಮತ್ತು ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ ಎಂದು ಡಿಪಿಎಆರ್ ಇಲಾಖೆ ಆದೇಶ ಹೊರಡಿಸಿತ್ತು.
ಸರ್ಕಾರದ ಈ ವಿವಾದಾಸ್ಪದ ಆದೇಶಕ್ಕೆ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಹಲವೆಡೆ ವ್ಯಾಪಕ ಟೀಕೆ ಹಾಗೂ ಹೋರಾಟದ ಎಚ್ಚರಿಕೆ ಹೆಚ್ಚಿದ ಬೆನ್ನಲ್ಲೇ ಸರ್ಕಾರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಹೊರಡಿಸಿದ್ದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಪಡೆದಿದೆ.
ಫೋಟೋ/ವಿಡಿಯೋ ಚಿತ್ರೀಕರಣ ನಿಷೇಧ ಆದೇಶದ ಕುರಿತು ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಖಂಡನೆ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದಲೇ ಈ ಆದೇಶ ಹೊರಡಿಸಿದೆ. ಇದು ಶೇ.40 ರಷ್ಟು ಕಮಿಷನ್ ಸರ್ಕಾರ ಎಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಕ್ರಮವನ್ನು ಟೀಕಿಸಿದ್ದರು.
ಇದನ್ನು ಗಮನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಸರ್ಕಾರಕ್ಕೆ ಈ ಆದೇಶದಿಂದ ಕೆಟ್ಟ ಹೆಸರು ಬರುತ್ತದೆ ಎನ್ನುವ ಮುನ್ಸೂಚನೆ ನೀಡಿರುವುದರಿಂದ ಡಿಪಿಎಆರ್ ತನ್ನ ಆದೇಶವನ್ನ ಹಿಂತೆಗೆದುಕೊಂಡಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮತ್ತು ಪದಾಧಿಕಾರಿಗಳು ಕಳೆದ ಫೆಬ್ರವರಿಯಲ್ಲಿ ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳ ಫೋಟೋ ಮತ್ತು ವಿಡಿಯೋ ಮಾಡುವುದನ್ನು ನಿರ್ಬಂಧಿಸಬೇಕೆಂದು ಕೋರಿದ್ದರು. ಮನವಿಯಲ್ಲಿ ಎಲ್ಲ ಜಿಲ್ಲೆ, ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಕೆಲವರು ಕಚೇರಿಯ ಫೋಟೋ/ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಆ ಮೂಲಕ ಇಲಾಖೆಯ ಘನತೆಗೆ ಕುಂದುಂಟಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಉಂಟಾಗುತ್ತಿರುವುದರಿಂದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ, ವಿಡಿಯೋ ಮಾಡದಂತೆ ನಿರ್ಬಂಧಿಸುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಅನುಮತಿಯಿಲ್ಲದೇ ಫೋಟೋ, ವಿಡಿಯೋ ತೆಗೆಯುವ ಹಾಗಿಲ್ಲ