ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸಂಭವಿಸುತ್ತಿರುವ ಕೊರೊನಾ ಸಾವಿನ ಲೆಕ್ಕ ಕೊಡಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಒತ್ತಾಯಿಸಿರುವ ಅವರು, ಬೆಂಗಳೂರಿನ ಪರಿಸ್ಥಿತಿ ಅಕ್ಷರಶಃ ಕೈಮೀರಿದೆ. ಸರ್ಕಾರ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸುಳ್ಳು ಲೆಕ್ಕ ನೀಡುತ್ತಿದೆ ಅನ್ನೋ ಮಾಧ್ಯಮಗಳ ವರದಿ ನಿಜಕ್ಕೂ ಆಘಾತಕಾರಿ. ಸರ್ಕಾರ ಕೊರೊನಾ ಸಾವುಗಳನ್ನು ಮುಚ್ಚಿಡುತ್ತಿದೆಯೇ? ಅಂತಹ ಅವಶ್ಯಕಥೆಯಾದರೂ ಏನಿದೆ? ಸರ್ಕಾರ ಸಾವನ್ನು ಮುಚ್ಚಿಟ್ಟು ಸಾಧಿಸುವುದಾದರೂ ಏನು? ಎಂದಿದ್ದಾರೆ.
ಸರ್ಕಾರದ ಲೆಕ್ಕದ ಪ್ರಕಾರ ಮಾರ್ಚ್ ತಿಂಗಳಲ್ಲಿ 136, ಏಪ್ರಿಲ್ 1 ರಿಂದ 26 ರವರೆಗೆ 1,422 ಕೋವಿಡ್ ಸೋಂಕಿತರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದಿದೆ. ಆದರೆ ಬೆಂಗಳೂರಿನಲ್ಲಿ ಕೋವಿಡ್ ಮೃತದೇಹಗಳ ಅಂತ್ಯಕ್ರಿಯೆಗಾಗಿ ಮೀಸಲಿಟ್ಟಿರೋ ಸ್ಮಶಾನಗಳಲ್ಲಿ 3,104 ಮೃತದೇಹಗಳ ಅಂತ್ಯಕ್ರಿಯೆ ಆಗಿದೆ. ಸರ್ಕಾರ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆಯನ್ನೂ ಮುಚ್ಚಿಡುತ್ತಿರುವುದು ನಿಜಕ್ಕೂ ಆತಂಕಕಾರಿ. ಪರಿಸ್ಥಿತಿ ಕೈ ಮೀರಿಲ್ಲ ಎಂದು ಬಿಂಬಿಸಲು ಇಂಥಾ ಕೆಳಮಟ್ಟಕ್ಕಿಳಿದಿದೆಯಾ ಈ ರಾಜ್ಯ ಬಿಜೆಪಿ ಸರ್ಕಾರ? ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರೇ ಉತ್ತರಿಸಿ ಎಂದಿದ್ದಾರೆ.
ರಾಜ್ಯದಲ್ಲಿರುವುದು ಸುಳ್ಳಿನ ಸರ್ಕಾರ. ಬೆಂಗಳೂರಿನಲ್ಲಿ ಮಾತ್ರವಲ್ಲ, ಜಿಲ್ಲೆಗಳಲ್ಲೂ ಸಾವಿನ ಸಂಖ್ಯೆ ಮತ್ತು ಸೋಂಕಿತರ ಸಂಖ್ಯೆ ಮುಚ್ಚಿಡಲಾಗುತ್ತಿದೆ ಎಂಬ ಆರೋಪಗಳಿವೆ. ಈ ಕೂಡಲೇ ಸರ್ಕಾರ ಸಾವು ಮತ್ತು ಸೋಂಕಿತರ ನಿಜವಾದ ಸಂಖ್ಯೆಗಳನ್ನು ರಾಜ್ಯದ ಜನರ ಮುಂದಿಡಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.