ಬೆಂಗಳೂರು : ಸಿನಿಮಾ ಉದ್ಯಮ ಅವಲಂಬಿತರು ಮತ್ತು ವ್ಯಾಪಾರ, ವಹಿವಾಟು ನಡೆಸುವವರಿಗೆ ಸಹಕಾರಿಯಾಗುವ ರೀತಿ ಅನ್‌ಲಾಕ್ 4.Oನಲ್ಲಿ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಮೂರನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಕೋವಿಡ್ ಉಸ್ತುವಾರಿ ಸಚಿವರು ಹಾಗು ಅಧಿಕಾರಿಗಳ ಜೊತೆಗೆ ಸಿಎಂ ಯಡಿಯೂರಪ್ಪ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಅಲೆಯಲ್ಲಿ ಲಾಕ್‌ಡೌನ್ ಮಾಡುವ ಮೂಲಕ ಸೋಂಕನ್ನು ನಿಯಂತ್ರಣ ಮಾಡಿದ್ದೇವೆ. ಈಗ ಹಂತ ಹಂತವಾಗಿ ಅನ್‌ಲಾಕ್ ಪ್ರಕ್ರಿಯೆ ಮಾಡುತ್ತಿದ್ದೇವೆ. ಇದರ ಇನ್ನೊಂದು ಹಂತವಾಗಿ ನಾಳೆಯಿಂದ ರಾಜ್ಯದಲ್ಲಿ ಚಿತ್ರಮಂದಿರಗಳು, ರಂಗಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುತ್ತಿದೆ ಎಂದರು.
ನೈಟ್ ಕರ್ಫ್ಯೂ ಸಮಯ ಬದಲಾವಣೆ
ನೈಟ್ ಕರ್ಫ್ಯೂ ಮುಂದುವರೆಸಲಾಗುತ್ತಿದೆ. ಆದರೆ, ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ರಾತ್ರಿ 9ರ ಬದಲು 10 ಗಂಟೆಯಿಂದ ಕರ್ಫ್ಯೂ ಜಾರಿ ಮಾಡಲಿದ್ದೇವೆ. ಇದರಿಂದಾಗಿ ವ್ಯವಹಾರ ಮಾಡುವವರಿಗೆ, ಉದ್ಯಮಗಳಿಗೆ ಉಪಯೋಗವಾಗಲಿದೆ. ಅಂಗಡಿ-ಮುಂಗಟ್ಟು, ಹೋಟೆಲ್, ರೆಸ್ಟೊರೆಂಟ್ ಇತ್ಯಾದಿ ಎಲ್ಲ ವಲಯಕ್ಕೂ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಹೇಳಿದರು.
ದೇವಾಲಯದಲ್ಲಿ ಎಲ್ಲ ಸೇವೆ ಆರಂಭ : ಇನ್ಮುಂದೆ ದೇವಾಲಯಗಳಲ್ಲಿ ಎಲ್ಲ ರೀತಿಯ ಸೇವೆಗಳು ಪುನಾರಂಭಗೊಳ್ಳಲಿವೆ. ಪೂಜೆ ಮಾಡಲು, ಹರಕೆ ತೀರಿಸಲು, ಅರ್ಚನೆ, ಪ್ರಸಾದಕ್ಕೆ ಅವಕಾಶ ಕೊಡಲಾಗುತ್ತದೆ. ದೇವಸ್ಥಾನಗಳಲ್ಲಿದ್ದಂತಹ ಉಳಿದ ನಿರ್ಬಂಧಗಳನ್ನು ನಾಳೆಯಿಂದ ಅನ್ವಯವಾಗುವಂತೆ ತೆರವು ಮಾಡಲಾಗಿದೆ. ಇತರೆ ಧರ್ಮದ ಪ್ರಾರ್ಥನಾ ಮಂದಿರಗಳಿಗೂ ಇದೇ ನಿಯಮ ಅನ್ವಯವಾಗಲಿದೆ ಎಂದರು.
ಪಬ್ಗಳನ್ನು ಓಪನ್ ಮಾಡುವ ಬಗ್ಗೆ ಚರ್ಚೆಯಾಗಿದೆ. ಆದರೆ, ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಜುಕೊಳ ತೆರೆಯುವ ಬಗ್ಗೆ ನಿರ್ಧಾರವಾಗಿಲ್ಲ ಎಂದರು. ಸಚಿವ ಸುಧಾಕರ್ ಬೆಂಗಳೂರಿನಲ್ಲಿಯೇ ಇದ್ದಾರೆ. ಅವರು ಈ ಸಭೆಗೆ ಬರಬೇಕಿತ್ತು. ಆದರೆ, ಯಾಕೆ ಬಂದಿಲ್ಲ ಎಂದು ಗೊತ್ತಿಲ್ಲ. ಮುಖ್ಯಮಂತ್ರಿಗಳ ಅನುಮತಿ ಪಡೆದಿರಬಹುದು ಎನಿಸುತ್ತದೆ. ಈ ಕುರಿತು ಅವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಸುಧಾಕರ್ ಗೈರಿನ ಕುರಿತು ಪ್ರತಿಕ್ರಿಯೆ ನೀಡಿದರು.
ಮೂರನೇ ಅಲೆಗೆ ಸಿದ್ದತೆ : ಮೂರನೇ ಅಲೆಗೆ ಬೇಕಾದ ಎಲ್ಲ ತಯಾರಿ ಮಾಡುವಂತೆ ಮುಖ್ಯಮಂತ್ರಿಗಳು ಸ್ಪಷ್ಟ ಸೂಚನೆ ನೀಡಿದ್ದಾರೆ. ಮಕ್ಕಳ ಆರೈಕೆ ಹಾಗೂ ಆರೋಗ್ಯ ಕಾಪಾಡಲು ಮಕ್ಕಳ ತಜ್ಞರ ಕೊರತೆ ಯಾವ ಜಿಲ್ಲೆಯಲ್ಲಿದೆ ಎಂದು ನೋಡಿ ಸರಿಪಡಿಸುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ನೆರೆ ಸಂಭವಿಸುವ ಪ್ರದೇಶಗಳ ಕುರಿತು ಗಮನ : ಬೆಂಗಳೂರಿನಲ್ಲಿ ಮಳೆ ಹಾನಿ ಸೇರಿ ಕೊಳಗೇರಿಗಳು, ತಗ್ಗುಪ್ರದೇಶಗಳಲ್ಲಿ ಮಳೆನೀರು ನುಗ್ಗುವ ಸಾಧ್ಯತೆ ಇದೆ. ಈ ಕುರಿತು ಬಿಬಿಎಂಪಿ ಆಯುಕ್ತರಿಗೆ ಸೂಚನೆ ಕೊಟ್ಟಿದ್ದಾರೆ. ಈ ವಾರದಲ್ಲಿ ಸಭೆಯನ್ನು ಮಾಡುವಂತೆ ತಿಳಿಸಿದ್ದಾರೆ.
ನೆರೆ ಆಗುವಂತಹ ಪ್ರದೇಶಗಳ ಬಗ್ಗೆ ಗಮನಹರಿಸಲು ಸೂಚನೆ ನೀಡಿದ್ದಾರೆ. ಇದರ ಜೊತೆಗೆ ನಗರದಲ್ಲಿ ನಡೆಯುತ್ತಿರುವ ಕೆಲಸಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಲ್ಲಾ ಕಾಮಗಾರಿಗಳನ್ನು ಮುಂದುವರಿಸಬೇಕು ಎಂದು ಸೂಚನೆ ಕೊಡಲಾಗಿದೆ ಎಂದು ಆರ್. ಅಶೋಕ್ ಮಾಹಿತಿ ನೀಡಿದರು.