ಬೆಂಗಳೂರು: ಮೇಕದಾಟು ಯೋಜನೆಗೆ ಆಗ್ರಹಿಸಿ ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಕಾಂಗ್ರೆಸ್ ಪಾದಯಾತ್ರೆ ತಡೆಗೆ ಮುಂದಾಗದ ಸರ್ಕಾರ, ಕಾನೂನು ರೀತಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ನೀಡಿದೆ. ರಾಜಕೀಯವಾಗಿ ಪಾದಯಾತ್ರೆ ಎದುರಿಸುವ ಟಾಸ್ಕ್ಅನ್ನು ಬೆಂಗಳೂರು ಸಚಿವರಿಗೆ ನೀಡಿದೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ನಲ್ಲಿ ಸಿಎಂ ಬೊಮ್ಮಾಯಿ ಅವರು ಬೆಂಗಳೂರು ಸಚಿವರ ಸಭೆ ನಡೆಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಚಿವರಾದ ಅಶ್ವತ್ಥ ನಾರಾಯಣ್, ಸುಧಾಕರ್, ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಜೊತೆ ಕಾಂಗ್ರೆಸ್ ಪಾದಯಾತ್ರೆ ವಿಷಯವನ್ನು ಕೇಂದ್ರೀಕರಿಸಿಕೊಂಡು ಸತತವಾಗಿ ಎರಡು ಗಂಟೆಗಳ ಕಾಲ ಸುದೀರ್ಘವಾದ ಸಮಾಲೋಚನೆ ನಡೆಸಿ ಸಚಿವರ, ನಾಯಕರ ಅಭಿಪ್ರಾಯ ಸಂಗ್ರಹಿಸಿ, ಸಲಹೆಗಳನ್ನು ಆಲಿಸಿದರು.
ಈಗಾಗಲೇ ಆರಂಭವಾಗಿರುವ ಪಾದಯಾತ್ರೆಯನ್ನು ತಡೆಯುವುದರಿಂದ ಕಾಂಗ್ರೆಸ್ಗೆ ಹೆಚ್ಚಿನ ಲಾಭವಾಗಲಿದೆ. ಹಾಗಾಗಿ ಬಲವಂತದಿಂದ ಪೊಲೀಸ್ ಅಸ್ತ್ರ ಬಳಸಿ ಪಾದಯಾತ್ರೆ ತಡೆಯುವ ಪ್ರಯತ್ನಕ್ಕೆ ಕೈಹಾಕದೆ ಕಾನೂನು ರೀತಿ ಕ್ರಮಕ್ಕೆ ಮುಂದಾಗಬೇಕು ಎಂದು ಸಚಿವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಕ್ಕುಚ್ಯುತಿ ಸಾಧ್ಯತೆ ಬಗ್ಗೆಯೂ ಚರ್ಚಿಸಿದರು.
(ಇದನ್ನೂ ಓದಿ: ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಬಿತ್ತು ಮೊಸಳೆ ಮರಿ)
ಎಲ್ಲ ಸಚಿವರ ಅಭಿಪ್ರಾಯ ಆಲಿಸಿದ ಸಿಎಂ ಬೊಮ್ಮಾಯಿ, ಪಾದಯಾತ್ರೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಡಳಿತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲು ನಿರ್ಧರಿಸಿದರು. ಸ್ಥಳೀಯ ಜಿಲ್ಲಾಡಳಿತ ಕರ್ಫ್ಯೂ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ನಿರ್ದೇಶನ ನೀಡಲಾಗುತ್ತದೆ ಎಂದು ಸಚಿವರಿಗೆ ತಿಳಿಸಿದ್ದಾರೆ ಎನ್ನಲಾಗ್ತಿದೆ.
ಪಾದಯಾತ್ರೆ ಆರಂಭಗೊಂಡಿದ್ದು, ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ. ಹಾಗಾಗಿ ಕೊನೆಯ ಆರು ದಿನದ ಪಾದಯಾತ್ರೆ ತಡೆಯಲೇಬೇಕು, ಯಾವುದೇ ಕಾರಣಕ್ಕೂ ಪಾದಯಾತ್ರೆ ಬೆಂಗಳೂರು ತಲುಪಲು ಬಿಡಬಾರದು, ಜನರ ಗಮನ ಪಾದಯಾತ್ರೆ ಮೇಲಿರದಂತೆ ನೋಡಿಕೊಳ್ಳಬೇಕು, ತನ್ನ ಪಾಡಿಗೆ ಕಾನೂನು ಕ್ರಮ ಆಗಲಿದೆ. ನೀವೆಲ್ಲಾ ರಾಜಕೀಯವಾಗಿ ಪಾದಯಾತ್ರೆ ಎದುರಿಸಬೇಕು ಎಂದು ಸಚಿವರಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
(ಇದನ್ನೂ ಓದಿ: Congress Mekedatu padayatra: 4 ಕಿ.ಮೀ ನಡೆಯುಷ್ಟರಲ್ಲಿ ಸಿದ್ದರಾಮಯ್ಯಗೆ ಸುಸ್ತು, ಕಾರಿನಲ್ಲಿ ವಾಪಸ್)