ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೆ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆ ಬರೆಯಲು ವಯೋಮಿತಿ ನಿರ್ಬಂಧವನ್ನು ತೆಗೆದು ಹಾಕಿ ಸರ್ಕಾರ ಆದೇಶ ಹೊರಡಿಸಿದೆ.
ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ 2011ನೇ ಸಾಲಿನ ನೇಮಕಾತಿಯಲ್ಲಿನ ಕರ್ಮಕಾಂಡ ದೊಡ್ಡ ಸುದ್ದಿ ಮಾಡಿತ್ತು. ಈ ಹಗರಣದಿಂದ ಪರೀಕ್ಷಾರ್ಥಿಗಳು ಅವಕಾಶದಿಂದ ವಂಚಿತರಾಗಿದ್ದರು. ಈ ಹಿನ್ನೆಲೆ 2017ರಲ್ಲಿ ಸರ್ಕಾರ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ಎಲ್ಲಾ ಅಭ್ಯರ್ಥಿಗಳಿಗೆ 2015-16ನೇ ಸಾಲಿನ ಹುದ್ದೆಗಳಿಗೆ ನಡೆಸಲಾದ ಗಜೆಟೆಡ್ ಪ್ರೊಬೇಷನರಿ ಪರೀಕ್ಷೆ ಬರೆಯಲು ಒಂದು ವಿಶೇಷ ಅವಕಾಶ ನೀಡಿ ಆದೇಶಿಸಿತ್ತು. ಇದೀಗ ಸರ್ಕಾರ ಮತ್ತೆ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ ಬರೆದ ಅಭ್ಯರ್ಥಿಗಳ ವಯೋಮಿತಿ ನಿರ್ಬಂಧವನ್ನು ತೆಗೆದು ಹಾಕಿ, ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.