ಬೆಂಗಳೂರು: ನನ್ನ ಜೀವನದಲ್ಲಿ ನಾನು ಯಾವತ್ತಿಗೂ ಸುಳ್ಳು ಹೇಳಿಲ್ಲ. ಸುಳ್ಳು ಹೇಳಿ ನನಗೆ ಸಿಎಂ ಆಗೋ ಆಸೆಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.
ಆರ್.ಟಿ ನಗರದಲ್ಲಿರುವ ಸಿಎಂ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ನಿನ್ನೆ ಪಾದಯಾತ್ರೆ ವೇಳೆ ನಾಯಕರು ನನ್ನ ಮೇಲೆ ಸುಖಾಸುಮ್ಮನೆ ಆರೋಪ ಮಾಡಿದ್ದಾರೆ. ಮೇಕೆದಾಟು ಯೋಜನೆ ವಿಚಾರದಲ್ಲಿ ಸಚಿವ ಗೋವಿಂದ ಕಾರಜೋಳ ಪದೇ ಪದೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ನಾನು ಜೀವನದಲ್ಲಿ ಸುಳ್ಳು ಹೇಳಿಲ್ಲ. ಅದರ ಅವಶ್ಯಕತೆಯೂ ನನಗೆ ಇಲ್ಲ. ಇನ್ನೂ ಮೇಕೆದಾಟು ಯೋಜನೆ ವಿಚಾರದಲ್ಲೂ ನಾನು ಸುಳ್ಳು ಹೇಳಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುಳ್ಳು ಹೇಳಿದವರು ಕಾಂಗ್ರೆಸ್ನವರು: ಸುಳ್ಳು ಹೇಳಿದವರು ಕಾಂಗ್ರೆಸ್ ನಾಯಕರು. ಕೂಡಲಸಂಗಮದಲ್ಲಿ ಆಣೆ ಮಾಡಿ ಅಧಿಕಾರಕ್ಕೆ ಬಂದು ಜನರಿಗೆ ಮೋಸ ಮಾಡಿದವರು ಕಾಂಗ್ರೆಸ್ನವರು. ಈಗ ಕಾವೇರಿ ಕೊಳ್ಳದ ಜನರಿಗೆ ಅಧಿಕಾರಕ್ಕಾಗಿ ಮೋಸ ಮಾಡುತ್ತಿದ್ದಾರೆ. ನಾನು ದಾಖಲೆ ಇಟ್ಟುಕೊಂಡೇ ಮಾತನಾಡಿದ್ದೇನೆ. ನಾನೇನು ಬಿಜೆಪಿ ಕಚೇರಿಯಲ್ಲಿರುವ ಕಾಗದ ಪತ್ರ ತಂದು ಹೇಳಿಲ್ಲ. ಹಿಂದಿನ ನಿಮ್ಮ ಸರ್ಕಾರದ ಅವಧಿಯಲ್ಲಿನ ದಾಖಲೆಗಳನ್ನೇ ಬಹಿರಂಗಪಡಿಸಿದ್ದೇನೆ. ಕಾಂಗ್ರೆಸ್ನವರ ಈ ಗಿಮಿಕ್ ನಡೆಯೋದಿಲ್ಲ. ಡಬಲ್ ಇಂಜಿನ್ ಸರ್ಕಾರ ಕಿತ್ತೊಗೆಯಬೇಕು ಎಂಬ ಭ್ರಮೆಯಲ್ಲಿದ್ದೀರಿ. ಎಂದಿಗೂ ನಿಮ್ಮ ಆಸೆ ಈಡೇರುವುದಿಲ್ಲ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಸಂಬಂಧ ಬಿಜೆಪಿ ಟೀಕೆಗೆ ಜನರೇ ಉತ್ತರ ನೀಡಿದ್ದಾರೆ: ಕಾಂಗ್ರೆಸ್
ಪಾದಯಾತ್ರೆಯಿಂದ ಪ್ರಯೋಜನ ಇಲ್ಲ: ಕಾಂಗ್ರೆಸ್ನವರು ಸರ್ಕಾರ ಕಿತ್ತೊಗೆಯುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೇಕೆದಾಟು, ಕೃಷ್ಣ ಮೇಲ್ದಂಡೆ ಯೋಜನೆಯನ್ನು ನಾವೇ ಮಾಡೋದು. ಇವರ ಪಾದಯಾತ್ರೆಯಿಂದ ಯಾವುದೇ ಪ್ರಯೋಜನ ಇಲ್ಲ ಎಂದು ವ್ಯಂಗ್ಯವಾಡಿದರು.