ಬೆಂಗಳೂರು: ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ವಜುಭಾಯ್ ವಾಲಾ ಭಾಷಣ ಆರಂಭಿಸಿದಷ್ಟೇ ವೇಗವಾಗಿ ಮೊಟಕುಗೊಳಿಸಿದ್ದು, ಕೇವಲದ 10 ನಿಮಿಷಕ್ಕೇ ಸದನದಿಂದ ನಿರ್ಗಮಿಸಿದ ಘಟನೆ ನಡೆಯಿತು.
ವಿಧಾನಮಂಡಲ ಜಂಟಿ ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ವಿಧಾನಸಭೆ ಬಾವಿಗಿಳಿದು ಬಿಜೆಪಿ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಈ ಸರ್ಕಾರಕ್ಕೆ ಬಹುಮತ ಇಲ್ಲ. ಹಾಗಾಗಿ ರಾಜ್ಯಪಾಲರು ಭಾಷಣ ಮಾಡಬಾರದು ಎಂದು ಧರಣಿ ನಡೆಸಿದರು. ಘೋಷಣೆಗಳನ್ನು ಕೂಗಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರು. ಗದ್ದಲ ಮಾಡಿದರೆ ಭಾಷಣ ಮೊಟಕುಗೊಳಿಸಿ ಹೋಗುವುದಾಗಿ ರಾಜ್ಯಪಾಲರು ಎಚ್ಚರಿಕೆ ನೀಡಿದರೂ ಬಿಜೆಪಿ ಧರಣಿ ಮುಂದುವರೆಸಿತು.
ಧರಣಿ ಗದ್ದಲದಿಂದಾಗಿ ಭಾಷಣ ನಿಲ್ಲಿಸಿದ ರಾಜ್ಯಪಾಲರು ಏನು ಮಾಡಬೇಕು ಎಂದು ಸ್ಪೀಕರ್ ಕಡೆ ನೋಡಿದರು. ಕೊನೆಯ ಪುಟ ಓದಿ ಮುಗಿಸಿ ಎನ್ನುವ ಸ್ಪೀಕರ್ ಸಲಹೆಯಂತೆ ಕೊನೆಯ 22 ಪುಟದ ಭಾಷಣದಲ್ಲಿ ಮೊದಲು ಹಾಗೂ ಕೊನೆಯ ಪುಟ ಮಾತ್ರ ಓದಿ ಭಾಷಣವನ್ನು ಮೊಟಕುಗೊಳಿಸಿ ಭಾಷಣ ಸಂಪೂರ್ಣ ಓದಿದ್ದೇನೆ ಸದನಕ್ಕೆ ಮಂಡಿಸಿದ್ದೇನೆ ಎಂದು ಹೇಳುತ್ತಾ ಭಾಷಣ ಮುಗಿಸಿದರು.
ನಂತರ ರಾಷ್ಟ್ರಗೀತೆ ಮೊಳಗಿತು. ರಾಷ್ಟ್ರಗೀತೆ ಬಳಿಕ ರಾಜ್ಯಪಾಲರು ಸದನದಿಂದ ನಿರ್ಗಮಿಸಿದರೆ, ಬಿಜೆಪಿ ಧರಣಿ ಮುಂದುವರೆಸಿದೆ.