ಬೆಂಗಳೂರು : ದಿಢೀರ್ ನವದೆಹಲಿಗೆ ತೆರಳಿರುವ ರಾಜ್ಯದ ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ವಿದ್ಯಮಾನಗಳು ಗರಿಗೆದರಿರುವ ಬೆನ್ನಲ್ಲೇ ರಾಜ್ಯಪಾಲರು ಪ್ರಧಾನಿ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಇಂದು ಬೆಳಗ್ಗೆ ನವದೆಹಲಿಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಪ್ರಧಾನಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿದರು. ಪಿಎಂ ಮೋದಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಗೆಹ್ಲೋಟ್ ಸಂಪುಟ ಪುನಾರಚನೆ ವೇಳೆ ಸ್ಥಾನ ಕಳೆದುಕೊಂಡಿದ್ದರು. ನಂತರ ಅವರನ್ನು ಕರ್ನಾಟಕ ರಾಜ್ಯಪಾಲರಾಗಿ ನೇಮಿಸಲಾಗಿತ್ತು.
ಮೋದಿ ಸಂಪುಟದಿಂದ ಹೊರ ನಡೆದ ನಂತರ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಮೋದಿಯನ್ನು ಭೇಟಿಯಾಗಲು ಸಾಧ್ಯವಾಗದೆ ಗೆಹ್ಲೋಟ್ ರಾಜ್ಯಕ್ಕೆ ಆಗಮಿಸಿ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಹಾಗಾಗಿ, ಇಂದು ದೆಹಲಿಗೆ ತೆರಳಿ ಪ್ರಧಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಎನ್ನಲಾಗಿದೆ.
ಸದ್ಯ ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಷಯ ತೀವ್ರ ಚರ್ಚೆಯಾಗುತ್ತಿದೆ. ಇಂತಹ ಸಮಯದಲ್ಲಿ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲರು ಭೇಟಿ ಮಾಡಿರುವುದು ಸಹಜವಾಗಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡುವಂತೆ ಮಾಡಿದೆ.