ಬೆಂಗಳೂರು: ಸಾಲು ಸಾಲು ರಜೆ ಬಂದಿರುವುದು ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಒಂದೆಡೆ ಖುಷಿಯಾದರೆ, ಮತ್ತೊಂದೆಡೆ ಸಾರಿಗೆ ನೌಕರರ ಮುಷ್ಕರದಿಂದ ಬಸ್‍ಗಳ ಓಡಾಟ ಇಲ್ಲದೇ ಇರುವುದು ಬೇಸರ ತಂದಿದೆ.
ಇಂದು ಎರಡನೇ ಶನಿವಾರದ ಕಾರಣ ಸರ್ಕಾರಿ ರಜೆ ಇದೆ. ಇನ್ನು ಏಪ್ರಿಲ್ 12ರ ಸೋಮವಾರದಂದು ವೈಯಕ್ತಿಕ ರಜೆ ಪಡೆದರೆ ಇಂದಿನಿಂದ ನಿರಂತರವಾಗಿ ಐದು ದಿನ ರಜೆ ಸಿಗಲಿದೆ. ಇಂದು ಈ ತಿಂಗಳ 2ನೇ ಶನಿವಾರ, ಏ. 11 ಭಾನುವಾರ, ಏ. 13 ಯುಗಾದಿ ಹಬ್ಬ, ಏ. 14 ಅಂಬೇಡ್ಕರ್ ಜಯಂತಿ ಹೀಗೆ ಒಂದರ ನಂತರ ಮತ್ತೊಂದು ಸರ್ಕಾರಿ ರಜೆ ಸಿಗಲಿದೆ. ಸರಣಿ ರಜೆ ಇರುವುದರಿಂದ ಊರುಗಳಿಗೆ ಹೋಗುವವರು, ಪ್ರವಾಸ ಕೈಗೊಳ್ಳುವವರಿಗೆ ಅನುಕೂಲ. ಆದ್ರೆ ಕೋವಿಡ್ ಸೋಂಕಿನ 2ನೇ ಅಲೆ ಹೆಚ್ಚುತ್ತಿರುವ ಆತಂಕ ರಜೆ ಸೌಲಭ್ಯ ಸದ್ಬಳಕೆಗೆ ಅಡ್ಡಿಯಾಗಿದೆ.
ನಗರ ಪ್ರದೇಶಗಳಲ್ಲಿ ನೆಲೆಸಿರುವ ಬಹಳಷ್ಟು ಮಂದಿ ಯುಗಾದಿ ಹಬ್ಬ ಆಚರಣೆಗೆ ತಮ್ಮ ತಮ್ಮ ಊರುಗಳಿಗೆ ಹೋಗುವುದು ವಾಡಿಕೆ. ಆದರೆ ಸಾರಿಗೆ ಸಂಸ್ಥೆಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವುದರಿಂದ ಪ್ರಯಾಣ ಮಾಡಲು ಅಡ್ಡಿಯಾಗಿದೆ. ವೈಯಕ್ತಿಕ ವಾಹನವುಳ್ಳವರಿಗೆ ಸಮಸ್ಯೆಯಿಲ್ಲ. ಇಲ್ಲದಿದ್ದರೆ ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗಬೇಕಿದೆ.
ಯುಗಾದಿ ಹಬ್ಬದ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ದೈನಂದಿನ ಬಸ್‍ಗಳ ಜೊತೆಗೆ ಹೆಚ್ಚುವರಿ ಬಸ್ ಸೌಲಭ್ಯವನ್ನು ಕಲ್ಪಿಸುತ್ತಿತ್ತು. ಸಾರಿಗೆ ಮುಷ್ಕರದಿಂದಾಗಿ ಈ ಬಾರಿ ದೈನಂದಿನ ಬಸ್‍ಗಳೇ ಇಲ್ಲದಂತಾಗಿದೆ. ಇದರಿಂದ ಬಹಳಷ್ಟು ಜನ ಯುಗಾದಿ ಹಬ್ಬಕ್ಕೆ ಊರಿಗೆ ಹೋಗಲು ಮೀನಾಮೇಷ ಎಣಿಸುವಂತಾಗಿದೆ.