ಬೆಂಗಳೂರು: ಕೋವಿಡ್ ಸೋಂಕಿತರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡದಂತೆ ಸರ್ಕಾರ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಕಳೆದ ವರ್ಷದಂತೆ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.

ಸರ್ಕಾರದಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸು ಆಗಿರುವ ರೋಗಿಗಳಿಗೆ ದಿನಕ್ಕೆ ಗರಿಷ್ಠ 10 ಸಾವಿರ ರೂ. ಚಿಕಿತ್ಸಾ ದರ ನಿಗದಿ ಮಾಡಿ ಕಳೆದ ಜೂನ್‌ನಲ್ಲಿ ಹೊರಡಿಸಿದ್ದ ಆದೇಶವನ್ನು ಮರು ಜಾರಿಗೊಳಿಸಿದೆ. ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವವರಿಗೆ ದಿನಕ್ಕೆ ಗರಿಷ್ಠ 25 ಸಾವಿರ ರೂ. ಚಿಕಿತ್ಸೆ ವೆಚ್ಚ ನಿಗದಿಪಡಿಸಲಾಗಿದೆ.
ಈ ಹಿಂದಿನ ಆದೇಶಕ್ಕೂ ಹೊಸ ಆದೇಶದಕ್ಕೂ ಚಿಕಿತ್ಸಾ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಜನರಲ್ ವಾರ್ಡ್‌ಗೆ ಪ್ರತಿದಿನ 5,200 ರೂ., ಆಮ್ಲಜನಕ ವ್ಯವಸ್ಥೆಯುಳ್ಳ ವಾರ್ಡ್‌ಗೆ ಪ್ರತಿದಿನ 7 ಸಾವಿರ ರೂ., ತೀವ್ರ ನಿಗಾ ವಿಭಾಗದ ವಾರ್ಡ್‌ಗೆ 8,500 ರೂ., ಐಸಿಯು ಜೊತೆಗೆ ವೆಂಟಿಲೇಟರ್ ವಾರ್ಡ್‌ಗೆ 10 ಸಾವಿರ ರೂ. ನಿಗದಿ ಮಾಡಲಾಗಿದೆ.
ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿದವರಿಗೆ ಹಾಗೆಯೇ ನಗದು ಅಥವಾ ವಿಮಾ ಯೋಜನೆ ಹೊಂದಿರುವವರಿಗೆ ಜನರಲ್ ವಾರ್ಡ್‌ಗೆ ದಿನಕ್ಕೆ 10 ಸಾವಿರ ರೂ., ಆಕ್ಸಿಜನ್ ವ್ಯವಸ್ಥೆಯುಳ್ಳ ವಾರ್ಡ್‌ಗೆ 12 ಸಾವಿರ ರೂ., ಐಸಿಯು ವಾರ್ಡ್‌ಗೆ 15 ಸಾವಿರ ರೂ., ಐಸಿಯು ಮತ್ತು ವೆಂಟಿಲೇಟರ್ ಹೊಂದಿರುವ ವಾರ್ಡ್‌ಗೆ 25 ಸಾವಿರ ರೂ.ಗಳನ್ನು ಸರ್ಕಾರ ನಿಗದಿ ಮಾಡಿದೆ.