ಬೆಂಗಳೂರು: ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ 24 ಸಂತ್ರಸ್ತರ ಪೈಕಿ 10 ಮಂದಿಗೆ 3 ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗಿದೆ. ಇದೀಗ ಉಳಿದ ಸಂತ್ರಸ್ತರಿಗೂ ಎರಡನೇ ಹಂತದ ಪರಿಹಾರ ಧನ ಬಿಡುಗಡೆಗೆ ಸರ್ಕಾರ ಗ್ರೀನ್ಸಿಗ್ನಲ್ ನೀಡಿದೆ.
ಕಳೆದ ವರ್ಷ ಕೇವಲ 10 ಜನರಿಗೆ ಮಾತ್ರ ಪರಿಹಾರ ಧನ ನೀಡಲಾಗಿತ್ತು. ಇನ್ನುಳಿದ 14 ಜನರಿಗೂ ಪರಿಹಾರ ಧನ ನೀಡಬೇಕೆಂಬ ಒತ್ತಾಯ ಕೇಳಿ ಬಂದ ಹಿನ್ನೆಲೆ, ಸಮಿತಿಯು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದೀಗ ಉಳಿದ ಸಂತ್ರಸ್ತರಿಗೂ ಸರ್ಕಾರದಿಂದ ಎರಡನೇ ಹಂತದಲ್ಲಿ ಪರಿಹಾರಧನ ಬಿಡುಗಡೆಗೆ ಅನುಮತಿ ನೀಡಿದೆ.
ಡಿಸಿಎಂ ಅಶ್ವತ್ಥ್ ನಾರಾಯಣ್ ಸಂತ್ರಸ್ತರ ಹಣ ಬಿಡುಗಡೆಗೆ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಇನ್ನು ಒಂದು ವಾರದಲ್ಲಿ ಸಂತ್ರಸ್ತರಿಗೆ ಹಣ ಸೇರಿಸುವಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ಸಂಪೂರ್ಣವಾಗಿ ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ರೂಪಾಯಿ, ಚಿಕಿತ್ಸೆ ಪಡೆಯುತ್ತಿರುವವರಿಗೆ 2 ಲಕ್ಷ ಹಾಗೂ ಮೈನರ್ ಇಂಜ್ಯುರಿಯಾಗಿರುವವರಿಗೆ ತಲಾ 1 ಲಕ್ಷ ರೂ. ಹಣ ನೀಡಲು ಮುಂದಾಗಿದ್ದಾರೆ. ಜೊತೆಗೆ ಒಂದು ವಾರದಲ್ಲಿ ಪರಿಹಾರ ಹಣ ಕೈಸೇರಲಿದೆ ಅಂತ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಬಿ.ಎಲ್ ಸುಜತಾ ರಾಥೋಡ್ ತಿಳಿಸಿದ್ದಾರೆ.