ಬೆಂಗಳೂರು : ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ವಯಂ ಸರ್ವೇ ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿ ಮಾಡಿಕೊಟ್ಟಿದೆ. ಆಡಳಿತದಲ್ಲಿ ಸುಧಾರಣೆ ತಂದು ನಾಗರಿಕರಿಗೆ ತಮ್ಮ ಹಕ್ಕುಗಾರಿಕೆ ಮೇಲೆ ನಿಯಂತ್ರಣ ಸಾಧಿಸಲು ಅವಶ್ಯಕ ಬದಲಾವಣೆಯನ್ನು ಮಾಡಿ ಸಶಕ್ತಗೊಳಿಸುವುದು ಸರ್ಕಾರದ ಆಡಳಿತ ಸುಧಾರಣೆಯ ಉದ್ದೇಶ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸ್ವಯಂ ಸೇವೆಯ (Self service) ಮುಖಾಂತರ ಸರ್ಕಾರದ ಸೇವಾ ಸೌಲಭ್ಯವನ್ನು ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ನಾಗರಿಕರು ಈ ಕೆಳಕಂಡ ಕಾರಣಗಳಿಗಾಗಿ ಭೂಮಾಪನ ಇಲಾಖೆಗೆ ಅವರ ಸ್ವಂತ ಜಮೀನಿನ ನಕ್ಷೆಗಾಗಿ ಅರ್ಜಿ ಸಲ್ಲಿಸುತ್ತಾರೆ.
- 11ಇ ಸ್ಕೆಚ್
- ತತ್ಕಾಲ್ ಪೋಡಿ
- ವಿಭಾಗ- ಹಾಲಿ ಹೊಂದಿರುವ ಕೃಷಿ ಜಮೀನಿನಲ್ಲಿ ತಮ್ಮ ಶಾಸನಾತ್ಮಕ ಹಕ್ಕಿನಂತ ವೈಯಕ್ತಿಕ ಭಾಗಾಂಶವನ್ನು ತೋರಿಸುವ ಸಂಬಂಧ ಸ್ಕೆಚ್
- ಭೂಪರಿವರ್ತನಾ ಪೂರ್ವ ಸ್ಕೆಚ್
ಪ್ರಸ್ತುತ ಜನರಿಗೆ ತಮ್ಮ ಸ್ವಂತ ಖಾಸಗಿ ಜಮೀನುಗಳಲ್ಲಿ ಮೇಲ್ಕಂಡ ಸ್ಕೆಚ್ಗಳಿಗಾಗಿ ಸಲ್ಲಿಸುವ ಅರ್ಜಿಗಳನ್ನು ಸರ್ಕಾರಿ ಭೂಮಾಪಕರು ಅಥವಾ ಪರವಾನಿಗೆ ಭೂಮಾಪಕರುಗಳಿಂದ ಸಿದ್ಧಪಡಿಸಲಾಗುತ್ತದೆ. ಸರ್ಕಾರಿ ಭೂಮಾಪಕರು ಮತ್ತು ಪರವಾನಿಗೆ ಭೂಮಾಪಕರ ಸಂಖ್ಯೆಯು ಸೀಮಿತವಾಗಿದೆ. ಪ್ರತಿ ತಿಂಗಳು ಒಂದು ಲಕ್ಷಕ್ಕಿಂತ ಹೆಚ್ಚಿನ ಅರ್ಜಿಗಳು ನಾಗರಿಕರಿಂದ ಸ್ವೀಕೃತವಾಗುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ಆರು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಅಳತೆಗಾಗಿ ವಿವಿಧ ಹಂತಗಳಲ್ಲಿ ಬಾಕಿ ಇರುತ್ತವೆ.
ನಾಗರಿಕರು ತಮ್ಮ ಸ್ವಂತ ಜಮೀನಿನಲ್ಲಿ ಯಾವುದೇ ರೀತಿಯ ಕ್ರಯ ಮತ್ತು ವಿಭಾಗ ಮಾಡಿಸಿಕೊಳ್ಳಲು ಅಗತ್ಯವಿರುವ ಸ್ಕೆಚ್ಗಾಗಿ ಹಲವಾರು ತಿಂಗಳುಗಳು ಮತ್ತು ಕೆಲವೊಮ್ಮೆ ವರ್ಷದವರೆಗೆ ಕಾಯಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರ ನೀಡಲು ನಾಗರಿಕರೇ ತಮ್ಮ ಜಮೀನಿಗೆ ಸ್ವಂತ ನಕ್ಷೆ ಮಾಡಿಕೊಳ್ಳಲು ಕಂದಾಯ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ. 11ಇ ಸ್ಕೆಚ್, ತತ್ಕಾಲ ಪೋಡಿ ಇವುಗಳನ್ನು ಜನರು ಸ್ವಂತ ಜಮೀನಿಗೆ ತಾವೇ ಮಾಡಿಕೊಳ್ಳಲು ಅವಕಾಶ ನೀಡುತ್ತಿದ್ದೇವೆ. ಇದರಿಂದ ಸರ್ವೇ ವಿಳಂಬವಾಗಿ, ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿಯುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.