ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಿದ ಪರಿಣಾಮ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಿರುವುದರಿಂದ ಪರಿಹಾರವಾಗಿ ಮಕ್ಕಳಿಗೆ ತೊಗರಿ ಬೇಳೆ, ಎಣ್ಣೆ ಮತ್ತು ಉಪ್ಪು ವಿತರಿಸಲು ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಕೊರೊನಾ ಸೋಂಕಿನಿಂದಾಗಿರುವ ಅನಾನುಕೂಲಗಳ ಬಗ್ಗೆ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.
ಓದಿ-ಶೂದ್ರರೆಂದರೆ ಬ್ರಾಹ್ಮಣರ ಗುಲಾಮರು: ಪ್ರಜ್ಞಾ ಠಾಕೂರ್ ಹೇಳಿಕೆಗೆ ಭಗವಾನ್ ಕಿಡಿ
ಮಧ್ಯಾಹ್ನ ಬಿಸಿಯೂಟ ಸ್ಥಗಿತಗೊಳಿಸಿದ್ದಕ್ಕೆ ಈಗಾಗಲೇ ಪರಿಹಾರ ರೂಪದಲ್ಲಿ ಪಡಿತರ ಧಾನ್ಯಗಳನ್ನು ವಿತರಿಸಲಾಗಿದೆ. ಇದೀಗ ನ್ಯಾಯಾಲಯದ ನಿರ್ದೇಶನದಂತೆ ಮಕ್ಕಳಿಗೆ ತೊಗರಿ ಬೇಳೆ, ಅಡುಗೆ ಎಣ್ಣೆ ಮತ್ತು ಅಯೋಡೈಸ್ಡ್ ಉಪ್ಪು ವಿತರಿಸಲಾಗುವುದು. ಈ ಕುರಿತು ಕಳೆದ ಮಂಗಳವಾರ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿ ಆದೇಶದ ಪ್ರತಿಯನ್ನು ಸಲ್ಲಿಸಿದರು. ಜತೆಗೆ, ನ್ಯಾಯಾಲಯ ಅನುಮತಿ ನೀಡಿದರೆ ಕೂಡಲೇ ವಿತರಣಾ ಕಾರ್ಯ ಆರಂಭಿಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಎಷ್ಟು ಸಮಯದಲ್ಲಿ ವಿತರಣೆ ಮಾಡಲಾಗುತ್ತದೆ ಎಂಬ ಬಗ್ಗೆ ವೇಳಾಪಟ್ಟಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಡಿ. 22ಕ್ಕೆ ಮುಂದೂಡಿತು.
ಪಡಿತರ ವಿತರಣೆ ಮಾಹಿತಿ
ಮೊದಲನೇ ಹಂತದಲ್ಲಿ ನವೆಂಬರ್, ಡಿಸೆಂಬರ್ ತಿಂಗಳಿಗೆ 1ರಿಂದ 5ನೇ ತರಗತಿ ಮಕ್ಕಳಿಗೆ 1 ಕೆಜಿ 406 ಗ್ರಾಂ ತೊಗರಿ ಬೇಳೆ, 1 ಲೀಟರ್ ಎಣ್ಣೆ, 6ರಿಂದ 10ನೇ ತರಗತಿ ಮಕ್ಕಳಿಗೆ 2 ಕೆಜಿ 835 ಗ್ರಾಂ ತೊಗರಿ ಬೇಳೆ ವಿತರಿಸಲಾಗುವುದು. ಎರಡನೇ ಹಂತದಲ್ಲಿ 2021ರ ಜನವರಿ, ಫೆಬ್ರವರಿಗೆ 1ರಿಂದ 5ನೇ ತರಗತಿವರೆಗೆ 1 ಕೆಜಿ 194 ಗ್ರಾಂ ತೊಗರಿ ಬೇಳೆ, 1 ಲೀಟರ್ ಎಣ್ಣೆ, 1 ಕೆಜಿ ಉಪ್ಪು, 9 ಮತ್ತು 10ನೇ ತರಗತಿ ಮಕ್ಕಳಿಗೆ 2 ಕೆಜಿ 624 ಗ್ರಾಂ ತೊಗರಿ ಬೇಳೆ, 1 ಲೀಟರ್ ಎಣ್ಣೆ, 1 ಕೆಜಿ ಉಪ್ಪು ವಿತರಿಸಲಾಗುವುದು. ಮೂರನೇ ಹಂತದಲ್ಲಿ 2021ರ ಮಾರ್ಚ್, ಏಪ್ರಿಲ್‌ಗೆ 1ರಿಂದ 5ನೇ ತರಗತಿವರೆಗೆ 529 ಗ್ರಾಂ ತೊಗರಿ ಬೇಳೆ, 1 ಲೀಟರ್ ಎಣ್ಣೆ, 9 ಮತ್ತು 10ನೇ ತರಗತಿ ಮಕ್ಕಳಿಗೆ 1 ಕೆಜಿ 521 ಗ್ರಾಂ ತೊಗರಿ ಬೇಳೆ, 1 ಲೀಟರ್ ಎಣ್ಣೆ ವಿತರಿಸಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.