ಕೌರವ ಖ್ಯಾತಿಯ ಹಾಗೂ ಕೃಷಿ ಸಚಿವರಾಗಿರುವ ಬಿ.ಸಿ ಪಾಟೀಲ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ಗರಡಿ. ಈಗಾಗಲೇ ಬಾದಾಮಿಯ ಸುಂದರ ತಾಣಗಳಲ್ಲಿ ಗರಡಿ ಚಿತ್ರದ ಟೈಟಲ್ ಸಾಂಗ್ ಅನ್ನು ಅದ್ಧೂರಿಯಾಗಿ ಚಿತ್ರೀಕರಣ ಮಾಡಿದ್ದ ಚಿತ್ರತಂಡವೀಗ ದೇವನಹಳ್ಳಿಯಲ್ಲಿರುವ ಕೋಟೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಕುಸ್ತಿ ಅಖಾಡದ ಸೆಟ್ ಹಾಕಿ ಚಿತ್ರೀಕರಣ ಮಾಡಿದೆ.
ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳುತ್ತಿದ್ರೆ, ಮತ್ತೊಂದೆಡೆ ಬಿ.ಸಿ ಪಾಟೀಲ್ ಪೈಲ್ವಾನ್ ಗುರುವಾಗಿ ಕುಳಿತಿದ್ದರು. ಊರಿನ ಎದುರಾಳಿಯಾಗಿ ಖಳ ನಟ ರವಿಶಂಕರ್ ಕುಳಿತಿದ್ದರು. ಇವರಿಬ್ಬರ ಸಮ್ಮುಖದಲ್ಲಿ ನಟ ಸೂರ್ಯ ಹಾಗೂ ರವಿಶಂಕರ್ ಮಗನ ಪಾತ್ರ ಮಾಡಿರುವ ಬಿ.ಸಿ ಪಾಟೀಲ್ ಅಳಿಯ ಸೂರಜ್ ಬೇಲೂರು ನಡುವಿನ ಕುಸ್ತಿಯ ಸನ್ನಿವೇಶವನ್ನು ಚಿತ್ರೀಕರಣ ಮಾಡಲಾಯಿತು. ಬಳಿಕ ಮಾಧ್ಯಮದ ಜೊತೆ ಇಡೀ ಚಿತ್ರತಂಡ ಸಿನಿಮಾದ ಮಾಹಿತಿ ಹಂಚಿಕೊಂಡರು.
ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ಈ ಚಿತ್ರದಲ್ಲಿ ಎಂಟು ಆ್ಯಕ್ಷನ್ ಸಿಕ್ವೇನ್ಸ್ಗಳು ಬರುತ್ತದೆ. ಗರಡಿಯ ಪೈಲ್ವಾನ್ಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಈ ಸಿನಿಮಾ ಮಾಡುತ್ತಿದ್ದೇವೆ. ಒಬ್ಬ ಬಡ ಹುಡುಗನ ಸುತ್ತ ನಡೆಯುವ ಕಥೆಯಿದು. ಪೈಲ್ವಾನ್ ಗುರುಗಳ ಪಾತ್ರದಲ್ಲಿ ಬಿ.ಸಿ ಪಾಟೀಲ್ ಅಭಿನಯಿಸುತ್ತಿದ್ದಾರೆ. ರಾಜ್ಯದ ಎಲ್ಲ ಮೂಲೆಗಳ ಪೈಲ್ವಾನ್ಗಳನ್ನಿಟ್ಟುಕೊಂಡು ಈ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ ಎಂದರು.
ನಟ ಸೂರ್ಯ ಮಾತನಾಡಿ, ಈ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದೇನೆ ಎಂದರು. ಇನ್ನು ದರ್ಶನ್ ಈ ಸಿನಿಮಾದಲ್ಲಿ ಸೂರ್ಯನ ಅಣ್ಣನ ಪಾತ್ರ ಮಾಡುತ್ತಿದ್ದಾರೆ. ಟಿಕ್ ಟಾಕ್ ಮಾಡುವ ಹುಡುಗಿಯ ಪಾತ್ರದಲ್ಲಿ ಸೊನಾಲ್ ಮಾಂಟೆರೋ ಇದ್ದಾರೆ. ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿರೋ ಬಿ.ಸಿ ಪಾಟೀಲ್ ಮಗಳು ಸೃಷ್ಟಿ ಪಾಟೀಲ್ ಮಾತನಾಡಿ, ಇದು ನಮ್ಮ ಬ್ಯಾನರ್ನಡಿ ನಿರ್ಮಿಸುತ್ತಿರುವ 16ನೇ ಸಿನಿಮಾ ಆಗಿದ್ದು, ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದೇವೆ ಎಂದರು.
ಚಿತ್ರದಲ್ಲಿ ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ತ್ರಿವೇಣಿ, ರವಿಚೇತನ್, ತೇಜಸ್ವಿನಿ ಪ್ರಕಾಶ್ ಹೀಗೆ ದೊಡ್ಡ ತಾರ ಬಳಗವಿದೆ.
ಇದನ್ನೂ ಓದಿ: 'ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಅನ್ನೋದನ್ನು ಸಂವಿಧಾನದಲ್ಲಿ ತೀರ್ಮಾನಿಸಲಿ'
ಗರಡಿ ಚಿತ್ರಕ್ಕೆ ವಿ. ಹರಿಕೃಷ್ಣರ ಸುಮಧುರ ಸಂಗೀತ, ನಿರಂಜನ್ ಬಾಬು ಅವರ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಇದೆ. ಚಿತ್ರವನ್ನು ವನಜಾ ಪಾಟೀಲ್ ನಿರ್ಮಾಣ ಮಾಡುತ್ತಿದ್ದು, ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಗರಡಿ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಟ್ರೈಲರ್ ಬಿಡುಗಡೆ ಮಾಡುವ ಪ್ಲಾನ್ನಲ್ಲಿದೆ.