ಬೆಂಗಳೂರು: ಗೋವಿಂದಪುರ ಪೊಲೀಸ್ ಠಾಣೆಯ ಕರ್ತವ್ಯ ನಿರತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮೇಲೆ ಕಿಡಿಗೇಡಿಗಳ ಗುಂಪು ದಾಳಿ ನಡೆಸಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಪಿಎಸ್‌ಐ ಇಮ್ರಾನ್ ಖಾನ್ ಅಲಿ ಕಾಡುಗೊಂಡನಹಳ್ಳಿ ಮತ್ತು ಗೋವಿಂದಪುರ ಠಾಣೆಗಳ ಗಡಿಯಲ್ಲಿ ಭಾನುವಾರ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದು, ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅನುಮಾನಾಸ್ಪದ ವಾಹನವೊಂದರ ಪರಿಶೀಲನೆ ವೇಳೆ ನಾಲ್ಕೈದು ಮಂದಿಯ ಗುಂಪು ಪಿಎಸ್‌ಐ ಮೇಲೆ ಹಲ್ಲೆ ನಡೆಸಿದೆ.
ಪಿಎಸ್ಐಗೆ ಕೈ, ಕಾಲು, ಮುಖ ಮತ್ತು ದೇಹದ ಕೆಲವಡೆ ಸಣ್ಣ-ಪುಟ್ಟ ಗಾಯಗಳಾಗಿವೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೂರ್ವ ವಿಭಾಗ ಡಿಸಿಪಿ ಡಾ ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.
ಪಿಎಸ್‌ಐ ಮತ್ತು ಕಿಡಿಗೇಡಿಗಳ ಗುಂಪಿನ ನಡುವೆ ನಡೆದ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ವಾಹನಗಳ ತಪಾಸಣೆ ವೇಳೆ ಆಕ್ರೋಶಗೊಂಡು ಗುಂಪು ಹಲ್ಲೆ ನಡೆಸಲಾಗಿದೆ. ಸದ್ಯ ಬಾಣಸವಾಡಿಯ ಸ್ಪೆಷಲಿಸ್ಟ್ ಆಸ್ಪತ್ರೆಗೆ ಪಿಎಸ್‌ಐ ಅನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ಚಿಕ್ಕ ವಯಸ್ಸಲ್ಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ಆತ್ಮಕಥೆಯಲ್ಲಿ ಕರಾಳ ಘಟನೆ ಬಿಚ್ಚಿಟ್ಟ ನೀನಾ ಗುಪ್ತಾ..!