ದಾವಣಗೆರೆ: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇನ್ನು ಮುಂದೆ ಯಾವ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ನಾನು ಚುನಾವಣೆಗೆ ಮುನ್ನ ಹೇಳಿದ್ದೆ. ಈಗ ಗೆದ್ದ ಮೇಲೂ ಹೇಳುತ್ತಿದ್ದೇನೆ. ಐದು ವರ್ಷಗಳ ಬಳಿಕ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ.
ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕೆಂಬ ಆಸೆ ಇದೆ. ಇದಕ್ಕಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಚುನಾವಣಾ ರಾಜಕೀಯಕ್ಕೆ ಮಾತ್ರ ಗುಡ್ ಬೈ ಹೇಳುತ್ತಿದ್ದೇನೆ. ಮುಂದೆ ಲೋಕಸಭೆಗೆ ಯುವಕರನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ. ಐದು ವರ್ಷ ಸಂಸದನಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತ ಕೆಲಸ ಮಾಡುತ್ತೇನೆ ಎಂದು ಹೇಳಿದ ಅವರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನನಗೆ ಮತದಾರರು ಮುನ್ನಡೆ ಕೊಟ್ಟಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರ ಕೆಲಸದ ಪರಿಣಾಮ ಒಂದು ಲಕ್ಷದ ಅರತ್ತೊಂಭತ್ತು ಮತಗಳಿಗೂ ಹೆಚ್ಚು ಲೀಡ್ನಿಂದ ಗೆದ್ದಿದ್ದೇನೆ. ಇದು ದಾವಣಗೆರೆ ಲೋಕಸಭೆ ಇತಿಹಾಸದಲ್ಲಿ ಅತಿ ಹೆಚ್ಚಿನ ಮತಗಳ ಅಂತರದ ಗೆಲುವಾಗಿದೆ ಎಂದರು.
ಈ ನೆಲದ ಇತಿಹಾಸದ ಪ್ರಕಾರ ನಾಲ್ಕನೇ ಬಾರಿ ಗೆದ್ದು ಇತಿಹಾಸ ನಿರ್ಮಿಸಿದ್ದೇನೆ. ನಾಲ್ಕು ಬಾರಿ ಇದುವರೆಗೆ ಯಾರೂ ಗೆದ್ದಿಲ್ಲ. ಈ ಸಾಧನೆ ನನ್ನದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿದೆ. ಬಿಜೆಪಿ ಕೂಡ ರಾಜ್ಯದಲ್ಲಿ 26 ಸ್ಥಾನ ಬರುತ್ತೆ ಎಂದು ಊಹಿಸಿರಲಿಲ್ಲ. ಆದ್ರೆ ಜನ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ದಾರೆ ಎಂದ ಅವರು, ರಾಜ್ಯ ರಾಜಕಾರಣದಲ್ಲಿ ಮೂರ್ನಾಲ್ಕು ದಿನಗಳಲ್ಲಿ ಮಹತ್ತರ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.