ಬೆಂಗಳೂರು: ಪಠ್ಯ ಪುಸ್ತಕ ಅಧ್ಯಯನ ಸಮಿತಿ ಎಡವಟ್ಟು ವಿಕೋಪಕ್ಕೆ ಹೋಗಿದೆ. ಸಾಹಿತಿಗಳು, ಕನ್ನಡಪರ ಸಂಘಟನೆಗಳು ಧ್ವನಿ ಎತ್ತಿವೆ. ಪತ್ರ ಚಳವಳಿ ಕೂಡ ಆರಂಭವಾಗಿದೆ. ಆದರೂ ಕೂಡ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕ ಅಧ್ಯಯನ ಸಮಿತಿಗೆ ಬಹಳ ತೂಕ ಇದೆ. ಕೊಳಕು ಮನಸ್ಸಿನ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಮಾಡಲಾಗಿದೆ. ಈ ಮೂಲಕ ಸರ್ಕಾರ ಏನು ಸಂದೇಶ ಕೊಡುತ್ತಿದೆ. ರೋಹಿತ್ ಚಕ್ರತೀರ್ಥ ಹಿಂದಿ ಹೇರಿಕೆಯನ್ನು ಬೆಂಬಲಿಸಿದರು. ಕನ್ನಡ ಬಾವುಟದ ಬಗ್ಗೆಯೂ ಆಕ್ಷೇಪದ ಹೇಳಿಕೆ ನೀಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪೊಸ್ಟ್ ಮಾಡಿದ್ದರು ಎಂದು ಆರೋಪಿಸಿದರು.
ಪಠ್ಯ ಪುಸ್ತಕ ಸಮಿತಿಯ ಏಳು ಜನ ಸದಸ್ಯರು ಒಂದೇ ವರ್ಗಕ್ಕೆ ಸೇರಿದವರು. ಒಂದೇ ಕೋಮಿಗೆ ಸೇರಿದ ಜನರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಹತ್ತು ಬರಹಗಳನ್ನು ಸಮಿತಿ ತೆಗೆದುಕೊಂಡಿದೆ. ಅದರಲ್ಲಿ ಎಂಟು ಒಂದೇ ಕೋಮಿಗೆ ಸೇರಿದ ಬರಹ ಆಗಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಸಾಹಿತಿಗಳ ಬರಹ ಬಿಡಲಾಗಿದೆ. ಈ ರೀತಿಯಲ್ಲಿ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಸರ್ಕಾರಕ್ಕೆ ಇದು ಕಾಣಿಸುತ್ತಿಲ್ಲವೆ. ಮುಖ್ಯಮಂತ್ರಿಗಳು ಏಕೆ ಸುಮ್ಮನಿದ್ದಾರೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕೂಡ ಸಮಿತಿ ಬೆಂಬಲಿಸಿ ಮಾತನಾಡುತ್ತಿದ್ದಾರೆ ಎಂದರು.
ಪಠ್ಯದ ವಿಚಾರದಲ್ಲಿ ಗೊಂದಲ ಮತ್ತು ಅನಾಹುತಕ್ಕೆ ಸಚಿವ ಬಿ.ಸಿ. ನಾಗೇಶ್ ಕಾರಣ. ಅವರು ಕೂಡ ರಾಜೀನಾಮೆ ನೀಡಬೇಕು. ಸರ್ಕಾರ ಇದರ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಉದ್ಧಟತನದಿಂದ ಮಾತನಾಡುತ್ತಿರುವ ರೋಹಿತ್ ಚಕ್ರತೀರ್ಥ ಸಾಹಿತ್ಯಕ್ಕೆ ಕೊಡುಗೆಯೇನು?. ಚಕ್ರತೀರ್ಥ ಮೊದಲು ಸಾಹಿತಿಗಳ ಕ್ಷಮೆ ಕೇಳಬೇಕು. ಮೊದಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಆದಿಚುಂಚನಗಿರಿ ಶ್ರೀಗಳೊಂದಿಗೆ ನಾಗೇಶ್ ಚರ್ಚಿಸಿದ್ದಾರೆ - ಗೃಹ ಸಚಿವ