ಬೆಂಗಳೂರು: ಬಾದಾಮಿ ಮೂಲ ಸೌಕರ್ಯ ಅಭಿವೃದ್ಧಿ ವಿಷಯದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಕ್ಷೇತ್ರದ ಶಾಸಕರೂ ಆಗಿರುವ ಇವರ ಪ್ರಯತ್ನದ ಫಲವಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 265 ಕೋಟಿ ರೂ.ಗಳ ಯೋಜನೆ ಮಂಜೂರಾಗಿದೆ.
ಯೋಜನೆ ಮಂಜೂರು ಮಾಡಿರುವ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ. ಯೋಜನೆ ಸಂಬಂಧ ಸಿದ್ದರಾಮಯ್ಯ ಅವರು ಗಡ್ಕರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಬಾದಾಮಿ ವಿಶ್ವವಿಖ್ಯಾತ ಪ್ರವಾಸಿ ತಾಣ. ಬಾದಾಮಿ, ಪಟ್ಟದಕಲ್ಲು, ಐಹೊಳೆಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ದೇಶ, ವಿದೇಶದ ಪ್ರವಾಸಿಗರು ಭೇಟಿ ನೀಡುತ್ತಾರೆ. ಉತ್ತಮವಾದ ರಸ್ತೆ ಸೌಲಭ್ಯ ಇಲ್ಲದೇ ಇದ್ದದ್ದು ಅವರಿಗೆ ಸಮಸ್ಯೆಯಾಗಿತ್ತು. ಈಗ ಇರುವ ರಸ್ತೆ ಕಿರಿದಾಗಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.
ಪಟ್ಟದಕಲ್ಲು, ಶಿರೂರು, ಗದ್ದನಕೇರಿ ಕ್ರಾಸ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮತ್ತು ಉನ್ನತೀಕರಣಕ್ಕೆ 265 ಕೋಟಿ ರೂ.ಗಳ ಯೋಜನೆ ಮಂಜೂರಾಗಿದ್ದು, ಕಾಮಗಾರಿಗೆ ಶೀಘ್ರವೇ ಆರಂಭವಾಗಿ ವರ್ಷದೊಳಗೆ ಪೂರ್ಣಗೊಳ್ಳಲಿದೆ. ಯೋಜನೆಯ ಒಂದನೇ ಪ್ಯಾಕೇಜ್ನಲ್ಲಿ 24 ಕಿ.ಮೀ. ಬಾದಾಮಿಯಲ್ಲಿ ಹಾದು ಹೋಗಲಿದೆ. ಎರಡನೇ ಪ್ಯಾಕೇಜ್ನಲ್ಲಿ ಶಿರೂರುವರೆಗೆ 15. ಕಿ.ಮೀ. ರಸ್ತೆ ಅಭಿವೃದ್ಧಿ ಆಗಲಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಬೇಲೂರು, ಹಳೆಬೀಡು, ಸೋಮನಾಥಪುರದ ಹೊಯ್ಸಳ ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ನಾಮನಿರ್ದೇಶನ
ಇದರಿಂದ ಹುಬ್ಬಳ್ಳಿ ಮೂಲಕ ಬಾದಾಮಿ, ಪಟ್ಟದಕಲ್ಲು ಮತ್ತಿತರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶ, ವಿದೇಶದ ಪ್ರವಾಸಿಗರಿಗೆ ಅನುಕೂಲವಾಗಲಿದ್ದು, ರಸ್ತೆ ಪ್ರಯಾಣ ಸುಖಕರವಾಗಿರಲಿದೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 367 ಹಾಗೂ 218ಕ್ಕೆ ಸಂಪರ್ಕ ಕಲ್ಪಿಸಲಿದೆ. ಹೆದ್ದಾರಿ 10 ಮೀಟರ್ ವಿಸ್ತರಣೆಯಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ