ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಐಷಾರಾಮಿ ರೇಂಜ್ ರೋವರ್ ಕಾರಿಗೆ ಬೆಂಕಿ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಗರದ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಸದಾಶಿವನಗರ ಸಪ್ತಗಿರಿ ಅಪಾರ್ಟ್‌ಮೆಂಟ್ ನಿವಾಸಿ ಟಿ.ಕೆ.ಶ್ರೀನಿವಾಸ ನಾಯ್ಡು ಎಂಬುವವರು ದೂರು ನೀಡಿದ್ದು, ಐದಾರು ಮಂದಿ ಅಪರಿಚಿತರ ವಿರುದ್ಧ ಸದಾಶಿವನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಶ್ರೀನಿವಾಸ್ ನಾಯ್ಡು ಪತ್ನಿಯಿಂದ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ವಾಸವಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಅಕ್ಟೋಬರ್ 19ರಂದು ರಾತ್ರಿ 10 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ನ ತಮ್ಮ ಫ್ಲ್ಯಾಟ್ ಬಳಿ ಅಪರಿಚಿತರು ಬಂದು ಕೋರಿಯರ್ ಬಾಯ್ ಸೋಗಿನಲ್ಲಿ ಬಾಗಿಲು ಬಡಿದಿದ್ದರು. ಕಿಟಕಿಯ ಮೂಲಕ ನೋಡಿದಾಗ ಐದಾರು ಮಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ಇರುವುದು ಕಂಡುಬಂದಿತ್ತು.
ಈ ವೇಳೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿಸಿಕೊಂಡ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೊಯ್ಸಳ ಸಿಬ್ಬಂದಿ ಮನೆಗೆ ಬಂದು ಅಪಾರ್ಟ್‌ಮೆಂಟ್ ಸುತ್ತಲೂ ಹುಡುಕಾಟ ನಡೆಸಿದರೂ ಆರೋಪಿಗಳು ಪತ್ತೆಯಾಗದಿದ್ದಾಗ ಪೊಲೀಸರು ಹಿಂದಿರುಗಿದ್ದಾರೆ.
ಕಾರಿನ ಟೈಯರ್ ಸ್ಪೋಟಗೊಂಡಾಗ ಗೊತ್ತಾಯಿತು..
ತಡರಾತ್ರಿ 12.40ರ ಸುಮಾರಿಗೆ ಅಪಾರ್ಟ್‌ಮೆಂಟ್ ಬೆಸ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಕಾರಿನ ಟೈಯರ್ ಸ್ಪೋಟಗೊಂಡ ಶಬ್ಧ ಕೇಳಿ ಬಂದಿತ್ತು. ಕೂಡಲೇ ಬಂದು ನೋಡಿದಾಗ ಕಾರಿಗೆ ಬೆಂಕಿ ಬಿದ್ದಿದ್ದು ದಟ್ಟವಾದ ಹೊಗೆ ಆವರಿಸಿತ್ತು. ಅದರಿಂದ ಮನೆಗೂ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆ ಐದಾರು ಅಪರಿಚಿತರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಶ್ರೀನಿವಾಸ ನಾಯ್ಡು ದೂರಿನಲ್ಲಿ ಉಲ್ಲೇಖಿಸಿದ್ದಾಾರೆ ಎಂದು ಪೊಲೀಸರು ಹೇಳಿದ್ದಾರೆ.