ಬೆಂಗಳೂರು: ಸೆಪ್ಟೆಂಬರ್ 28 ಅನ್ನು ವಿಶ್ವ ರೇಬೀಸ್ ದಿನವನ್ನಾಗಿ ಆಚರಿಸಲಾಗುತ್ತದೆ. ರಾಜ್ಯ ಸರ್ಕಾರ ಕೂಡ ಇಂದಿನಿಂದ ಮೂರು ದಿನಗಳ ಕಾಲ ರೋಗಕ್ಕೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದೆ.
ರೇಬೀಸ್ ರೋಗ:
ರೇಬೀಸ್‌ನಿಂದ ನರಳುತ್ತಿರುವ ಪ್ರಾಣಿಯು ಕಚ್ಚಿದಾಗ ಅಥವಾ ನೆಕ್ಕಿದಾಗ ಶರೀರದೊಳಗೆ ರೇಬೀಸ್ ವೈರಾಣು ಪ್ರವೇಶಿಸಿ, ರೇಬೀಸ್ ರೋಗ ಉಂಟಾಗುತ್ತದೆ. ರೇಬೀಸ್‌ನಿಂದ ನರಳುತ್ತಿರುವ ಪ್ರಾಣಿಯ ಜೊಲ್ಲಿನಿಂದ ರೇಬೀಸ್ ವೈರಾಣು ಇತರ ಪ್ರಾಣಿಗಳಿಗೆ ಹರಡುತ್ತದೆ. ಭಾರತದಲ್ಲಿ ಬಹುತೇಕ ಜನರಿಗೆ ಹುಚ್ಚುನಾಯಿ ಕಡಿತದಿಂದ ರೇಬೀಸ್ ಹರಡುತ್ತದೆ.
ಲಕ್ಷಣಗಳು
- ಉಗ್ರ ಹುಚ್ಚು: ಜೊಲ್ಲು ಸುರಿಸುವಿಕೆ, ಎಲ್ಲರ ಮೇಲೆ ಏರಿಹೋಗಿ ಕಚ್ಚಲು ಪ್ರಯತ್ನಿಸುವುದು, ಕರೆಗೆ ಪ್ರತಿಕ್ರಿಯೆ ನೀಡದಿರುವುದು, ಕ್ರಮೇಣ ಧ್ವನಿಯಲ್ಲಿ ವ್ಯತ್ಯಾಸ, ಗೊಂದಲ ಪಡುವುದು, ಪಾರ್ಶ್ವವಾಯು ಕಾಣಿಸಿ 8-10 ದಿನಗಳಲ್ಲಿ ಸಾವು ಸಂಭವಿಸುವುದು.
- ಮಂದ ಹುಚ್ಚು: ಮೂಲೆಯಲ್ಲಿ ಮುದುಡಿ ಕೂತಿರುವುದು, ಊಟ ಮಾಡದಿರುವುದು, ಗಂಟಲು ಊದುವಿಕೆ, ತೆರೆದ ಬಾಯಿಯನ್ನು ಮುಚ್ಚಲಾಗದೇ ಸಾವನ್ನಪ್ಪುವುದು.
ಹುಚ್ಚು ನಾಯಿ ಕಚ್ಚಿದರೆ ಏನು ಮಾಡಬೇಕು?
ಕಚ್ಚಿದ ಗಾಯವನ್ನು ಸಾಬೂನು ಹಾಗೂ ನೀರಿನಿಂದ ಚೆನ್ನಾಗಿ ತೊಳೆಯಬೇಕು, ಕಚ್ಚಿದ ಗಾಯಕ್ಕೆ ಡೆಟಾಲ್ ಅಥವಾ ಸಾವ್ಲಾನ್ ಅಥವಾ ಪೊವೀಡೀನ್ ಐಯೋಡೀನ್ ನಂತಹ ರೋಗ ನಿರೋಧಕ ಔಷಧ ಹಚ್ಚಬೇಕು. ಯಾವುದೇ ಕಾರಣಕ್ಕೂ ಗಾಯದ ಭಾಗವನ್ನು ಬಟ್ಟೆಯಿಂದ ಕಟ್ಟಬಾರದು. ಗಾಯವಾದರೆ, ಕೂಡಲೇ ರೇಬೀಸ್ ಇಮ್ಯೂನೋಗ್ಲೋಬುಲಿನ್ ಚುಚ್ಚುಮದ್ದನ್ನು ಗಾಯಕ್ಕೆ ಕೊಡಿಸಬೇಕು.
ಇದನ್ನೂ ಓದಿ: 50 ಸಾವಿರ ಕೋಟಿಗೆ WMA ಮಿತಿಗೊಳಿಸಿದ ಆರ್ಬಿಐ: ಏನಿದು WMA?
ಹುಚ್ಚು ನಾಯಿ ಕಡಿತಕ್ಕೊಳಗಾದ ಮನುಷ್ಯ ಅಥವಾ ಜಾನುವಾರುಗಳಿಗೆ 0, 3, 7, 14, 28ನೇ ದಿನಗಳಂದು ತಪ್ಪದೇ ರೇಬೀಸ್ ಲಸಿಕೆಯನ್ನು ಹಾಕಿಸಬೇಕು.