ಬೆಂಗಳೂರು: ನಗರದ ಟೌನ್ಹಾಲ್ ಮುಂದೆ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ ಪ್ರಕರಣದಲ್ಲಿ ಬಂಧಿತಳಾಗಿದ್ದ ಆರೋಪಿ ಆರ್ದ್ರಾಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಆರೋಪಿ ಆರ್ದ್ರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 56ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ನಾರಾಯಣ ಪ್ರಸಾದ್, ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.
ಆರ್ದ್ರಾ ಪೊಲೀಸರ ತನಿಖೆಗೆ ಸಹಕರಿಸಬೇಕು. ಸಾಕ್ಷಿ ನಾಶಪಡಿಸಬಾರದು. 50 ಸಾವಿರ ಮೌಲ್ಯದ 2 ಶ್ಯೂರಿಟಿಗಳನ್ನು ನೀಡಬೇಕು. ಮತ್ತೆಂದೂ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಸಾರ್ವಜನಿಕವಾಗಿ ವಿವಾದಿತ ಮಾದರಿಯ ಭಾಷಣ ಅಥವಾ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಅನುಮತಿ ಇಲ್ಲದೆ ಪೊಲೀಸ್ ಠಾಣಾ ವ್ಯಾಪ್ತಿ ಬಿಟ್ಟು ತೆರಳಬಾರದು ಎಂದು ಷರತ್ತುಗಳನ್ನು ವಿಧಿಸಿದೆ.
ಸಿಎಎ ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುವ ವೇಳೆ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಮರುದಿನ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಟೌನ್ಹಾಲ್ ಬಳಿ ಅಮೂಲ್ಯ ಸ್ನೇಹಿತೆ ಆರ್ದ್ರಾ ಫ್ರೀ ಕಾಶ್ಮೀರ್ ಎಂದು ಬರೆದಿದ್ದ ಭಿತ್ತಿಪತ್ರ ಪ್ರದರ್ಶಿಸಿದ್ದಳು.