ಬೆಂಗಳೂರು: ನಗರದ ವೃದ್ಧೆಯೊಬ್ಬರಿಗೆ ಲಾಟರಿ ಬಂದಿದೆ ಎಂದು ಆಸೆ ತೋರಿಸಿ 1.67 ಕೋಟಿ ರೂ. ವಂಚನೆಯಾಗಿದೆ.
ಅಂಬುಜಾಕ್ಷಿ ಶ್ರೀನಿವಾಸ್ ಹಣ ಕಳೆದುಕೊಂಡ ವೃದ್ದೆ. ಕೆಲ ದಿನಗಳ ಹಿಂದೆ ಅಂಬುಜಾಕ್ಷಿ ಎಂಬುವವರಿಗೆ ಸ್ಯಾಮ್ಸಂಗ್ ಕಂಪನಿ ಹೆಸರಿನಲ್ಲಿ ವಂಚಕ ಕರೆ ಮಾಡಿದ್ದಾನೆ. ಕಂಪನಿಯಿಂದ ಪ್ರತಿವರ್ಷ ಲಾಟರಿ ನಡೆಸುತ್ತೇವೆ. ಲಾಟರಿಯಲ್ಲಿ ಆಯ್ಕೆಯಾದವರಿಗೆ ಬಹುಮಾನ ನೀಡುತ್ತೇವೆ. ಅದೇ ರೀತಿ ಈ ಬಾರಿ ಲಾಟರಿಯಲ್ಲಿ ನೀವೂ ಆಯ್ಕೆಯಾಗಿದ್ದು,10 ಲಕ್ಷ ಪೌಂಡ್ (93.80 ಕೋಟಿ ರೂ.) ನಿಮ್ಮದಾಗಲಿದೆ ಎಂದು ನಂಬಿಸಿದ್ದಾನೆ.
ಹಣ ಪಡೆಯಲು ಲೀಗಲ್ ಚಾರ್ಜ್ಗಾಗಿ 1.97 ಕೋಟಿ ರೂ. ಪಾವತಿಸಬೇಕೆಂದು ಕರೆಯಲ್ಲಿ ಹೇಳಿದ್ದಾನೆ. ಬಹುಮಾನ ಬಂದಿರುವುದಾಗಿ ನಂಬಿದ ವೃದ್ಧೆ ವಂಚಕನ ಮಾತಿಗೆ ಕಿವಿಗೊಟ್ಟಿದ್ದಾರೆ. ಹಂತ-ಹಂತವಾಗಿ ಆರೋಪಿಯ ಬ್ಯಾಂಕ್ ಖಾತೆಗೆ 1.97 ಕೋಟಿ ರೂ. ಪಾವತಿಸಿದ್ದಾಳೆ. ಹಣ ಪಡೆಯುತ್ತಿದ್ದಂತೆ ವಂಚಕ ವೃದ್ಧೆಯೊಂದಿಗೆ ಸಂಪರ್ಕ ಕಡಿತಗೊಳಿಸಿದ್ದಾನೆ. ಬಹುಮಾನದ ಆಸೆ ಹೊಂದಿದ್ದ ವೃದ್ಧೆಗೆ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಬೆಂಗಳೂರಿನ ಸಿಐಡಿ ಆರ್ಥಿಕ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಸಿಐಡಿ ಬಲೆ ಬೀಸಿದೆ.