ಬೆಂಗಳೂರು : ಕರ್ನಾಟಕ ರಾಜ್ಯ ಸಾರಿಗೆ ನಿಗಮ(ಕೆಎಸ್ಆರ್ಟಿಸಿ)ದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನೂರಾರು ಉದ್ಯೋಗಾಂಕ್ಷಿಗಳಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿದ್ದ ಇಬ್ಬರನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ನಿವಾಸಿಗಳಾದ ಮಂಜುನಾಥ್ ಹಾಗೂ ಅನಿಲ್ ಬಂಧಿತ ಆರೋಪಿಗಳು. ಹಲವು ವರ್ಷಗಳಿಂದ ಮಂಜುನಾಥ್ ವಿಜಯನಗರದಲ್ಲಿ ವಾಸವಾಗಿದ್ದ. ಈ ಹಿಂದೆ ಕೆಎಸ್ಆರ್ಟಿಸಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅಶಿಸ್ತು ಹಾಗೂ ಉತ್ತಮ ನಡವಳಿಕೆ ತೋರದ ಹಿನ್ನೆಲೆ ಕೆಎಸ್ಆರ್ಟಿಸಿ ಆಡಳಿತ ಮಂಡಳಿ ಈತನನ್ನು ಅಮಾನತು ಮಾಡಿತ್ತು. ಬಳಿಕ ವೃತ್ತಿಯಿಂದಲೂ ವಜಾ ಮಾಡಿತ್ತು.
ಕಾರು ಖರೀದಿ ಮಾಡಿ, ಕರ್ನಾಟಕ ಸರ್ಕಾರ ಎಂದು ನಾಮಫಲಕ
ಇದಾದ ಬಳಿಕ ಆರೋಪಿ ಅಕ್ರಮ ಹಣ ಸಂಪಾದನೆ ಮಾಡಲು ವಂಚನೆ ಮಾರ್ಗ ಹಿಡಿದಿದ್ದ. ಕೆಎಸ್ಆರ್ಟಿಸಿ ಚಾಲಕ, ನಿರ್ವಾಹಕ ಸೇರಿದಂತೆ ವಿವಿಧ ಹುದ್ದೆಗಳನ್ನು ಕೊಡಿಸುವುದಾಗಿ ಜನರನ್ನು ನಂಬಿಸುತ್ತಿದ್ದ. ನಂಬಿಕೆ ಬರುವಂತೆ ಮಾಡಲು ಕಾರು ಖರೀದಿ ಮಾಡಿ, ಕರ್ನಾಟಕ ಸರ್ಕಾರ ಎಂದು ನಾಮಫಲಕ ಹಾಕಿಕೊಂಡು ರಾಜ್ಯದ ಬಳ್ಳಾರಿ, ಗದಗ, ಚಿತ್ರದುರ್ಗ, ದಾವಣಗೆರೆ ಸೇರಿ ಮುಂತಾದ ಕಡೆಗಳಲ್ಲಿ ಓಡಾಡುತ್ತಿದ್ದ.
ನಿರುದ್ಯೋಗಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಕೆಎಸ್ಆರ್ಟಿಸಿಯಲ್ಲಿ ಟ್ರಾಫಿಕ್ ಇನ್‌ಸ್ಪೆಕ್ಟರ್ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ. ಈವರೆಗೆ ಸುಮಾರು 500 ಜನರಿಂದ ಅಂದಾಜು 15 ಕೋಟಿ ರೂ.ಹಣ ಪಡೆದಿದ್ದ ಎನ್ನಲಾಗುತ್ತಿದೆ. ಸಂಪೂರ್ಣ ತನಿಖೆ ಬಳಿಕ ಎಷ್ಟು ಹಣ ವಂಚಿಸಲಾಗಿದೆ ಎಂಬುದರ ಬಗ್ಗೆ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
100ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಕೆ
ನಿರುದ್ಯೋಗಿಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆರೋಪಿ ಮಂಜುನಾಥ್, ರಾಜಕಾರಣಿ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳ ಪರಿಚಯವಿದ್ದು ಹಣ ನೀಡಿದರೆ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಈತನ ಮಾತನ್ನು ನಂಬುತ್ತಿದ್ದ ನಿರುದ್ಯೋಗಿಗಳು ಕೆಲಸ ಸಿಗುವ ಆಸೆಯಿಂದ ಹಣ ನೀಡುತ್ತಿದ್ದರು.
ಕೆಲವರು ಆನ್ಲೈನ್ ಮುಖಾಂತರ ಹಣ ನೀಡಿದ್ದಾರೆ. ಕೋಟ್ಯಂತರ ರೂ.ಹಣ ವಿತ್ ಡ್ರಾ ಮಾಡಿದರೆ ಐಟಿ ತೊಂದರೆಯಾಗಲಿದೆ ಎಂದು ಭಾವಿಸಿ ಸಹಚರನಾಗಿದ್ದ ಅನಿಲ್ ಬ್ಯಾಂಕ್ ಖಾತೆಗೆ ಹಣ ಹಾಕಿ ವಿತ್ ಡ್ರಾ ಮಾಡಿಕೊಟ್ಟಿದ್ದಕ್ಕಾಗಿ ಕಮಿಷನ್ ನೀಡುತ್ತಿದ್ದ. ಜನರನ್ನು ವಂಚಿಸಲು ಹತ್ತಾರು ಫೋನ್ ಹಾಗೂ ನೂರಾರು ಸಿಮ್ ಕಾರ್ಡ್ ಬಳಸಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.
ನಿರುದ್ಯೋಗಿಗಳಿಂದ ಪಡೆದ ಹಣದ ಬಗ್ಗೆ ಪ್ರಶ್ನಿಸಿದರೆ ಇಲಾಖೆಯ ಅಧಿಕಾರಿಗಳಿಗೆ ನೀಡಿರುವೆ ಎಂದು ಹೇಳಿದ್ದಾನೆ. ಆರೋಪಿ ಬ್ಯಾಂಕ್ ಅಕೌಂಟ್ ನಿಂದ ಈವರೆಗೂ 2 ಕೋಟಿ ರೂ. ಹಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಚಾರ ನಿರೀಕ್ಷಕ, ಭದ್ರತಾ ಅಧಿಕಾರಿ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆಯುತ್ತಿಲ್ಲ: KSRTC ಸ್ಪಷ್ಟನೆ