ಬೆಂಗಳೂರು : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಸವೇಶ್ವರನಗರ ಮತ್ತು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಮನೆ ಕಳವು, ದ್ವಿಚಕ್ರ ವಾಹನ, ಮೊಬೈಲ್ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಸವೇಶ್ವರನಗರ ಠಾಣೆ ಪ್ರಕರಣ : ಮನೆ ಕಳವು ಮತ್ತು ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಮೂಲದ ಮಂಜುನಾಥ್ (23) ಹಾಗೂ ಪ್ರಶಾಂತ್ (27) ಬಂಧಿತರು. ಆರೋಪಿಗಳಿಂದ 8 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣಗಳು ವಶಕ್ಕೆ ಪಡೆಯಲಾಗಿದೆ.
ಇತ್ತೀಚೆಗೆ ಬಸವೇಶ್ವರನಗರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಚಿನ್ನದ ಸರ ಬಿಚ್ಚಿ ಮನೆಯ ಟೇಬಲ್ ಮೇಲೆ ಇಟ್ಟು ವಾಯವಿಹಾರಕ್ಕೆ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿದ ಆರೋಪಿಗಳು ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧನದಿಂದ ಬಸೇವಶ್ವರನಗರ, ಅನುಗೊಂಡನಹಳ್ಳಿ, ಸರ್ಜಾಪುರ, ಕೆಂಬಾರ್ಲಾಹಳ್ಳಿ, ಶ್ರೀನಿವಾಸಪುರ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್‌ಆರ್‌ನಗರ ಪ್ರಕರಣ : ಕಳವು ಮಾಡಿದ್ದ ದ್ವಿಚಕ್ರ ವಾಹನಗಳಲ್ಲಿ ಜಾಲಿರೇಡ್ ಮಾಡಿ, ಒಂಟಿಯಾಗಿ ಮಾತನಾಡುತ್ತ ಹೋಗುತ್ತಿದ್ದ ಸಾರ್ವಜನಿಕರ ಮೊಬೈಲ್ ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಹಳ್ಳಿಯ ಕೌಶಿಕ್ (20) ಮತ್ತು ರಾಹುಲ್ (21) ಬಂಧಿತರು. ಆರೋಪಿಗಳಿಂದ 9.50 ಲಕ್ಷ ರೂ. ಮೌಲ್ಯದ 6 ದ್ವಿಚಕ್ರ ವಾಹನಗಳು ಹಾಗೂ 22 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ಬಂಧನದಿಂದ ರಾಜರಾಜೇಶ್ವರಿನಗರ, ಬ್ಯಾಟರಾಯನಪುರ, ಹಾರೋಹಳ್ಳಿ, ಸಂಜಯನಗರ, ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಗಳಲ್ಲಿ ಕಳವು ಪ್ರಕರಣ ಪತ್ತೆಯಾಗಿವೆ.
ಆರೋಪಿಗಳು ಸೆ.6ರಂದು ರಾಜರಾಜೇಶ್ವರಿನಗರದ ಗಿರಿಧಾಮ ಲೇಔಟ್‌ನ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಿದ್ದರು. ಅದೇ ವಾಹನದಲ್ಲಿ ಮೊಬೈಲ್ ಕಳವು ಮಾಡಿರುವುದು ಆರೋಪಿಗಳ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.