ಬೆಂಗಳೂರು: ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂಧಿತನಾಗಿದ್ದ ರೌಡಿಶೀಟರ್ ರಾಹುಲ್ನನ್ನು ಜಾಮೀನಿನ ಮೇಲೆ ಬಿಡಿಸಲು ಅವನ ಶಿಷ್ಯಂದಿರು ಗಾಂಜಾ ಮಾರಾಟಕ್ಕೆ ಇಳಿದಿದ್ದರು. ಇದೀಗ ಇವರು ಕೂಡ ಪೊಲೀಸರ ಅತಿಥಿಗಳಾಗಿದ್ದಾರೆ.
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕಿರಣ್, ಮಂಜು, ರಾಹುಲ್ ಹಾಗೂ ಕಾರ್ತಿಕ್ ಎಂಬುವರನ್ನು ಬಂಧಿಸಿ 20 ಕೆ.ಜಿ.ಗಾಂಜಾ ಹಾಗೂ ಒಂದು ಲಾಂಗ್ ಜಪ್ತಿ ಮಾಡಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಕುಳ್ಳ ರಿಜ್ವಾನ್, ಗುಡ್ಡೆ ಭರತ್ ಹಾಗೂ ಆಟೋ ವಿಜಿ ಎಂಬುವರ ಪತ್ತೆಗಾಗಿ ವಿವಿಪುರಂ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹಲವು ತಿಂಗಳಿಂದ ಆಂಧ್ರದ ಡ್ರಗ್ಸ್ಪೆಡ್ಲರ್ಗಳಿಂದ ಸ್ಟಾರ್ ರಾಹುಲ್, ಕುಳ್ಳ ರಿಜ್ವಾನ್ ನೇತೃತ್ವದ ತಂಡ ಗಾಂಜಾ ಖರೀದಿಸಿ ತಮ್ಮ ಸಹಚರರ ಮೂಲಕ ಮಾರಾಟ ಮಾಡಿಸುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ರೌಡಿಶೀಟರ್ ಸ್ಟಾರ್ ರಾಹುಲ್ನನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದರು. ವಿಚಾರಣೆಗಾಗಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ತಮ್ಮ ನೆಚ್ಚಿನ ಗುರುವಾಗಿದ್ದ ಸ್ಟಾರ್ ರಾಹುಲ್ನನ್ನು ಜಾಮೀನಿನ ಮೇಲೆ ಬಿಡಿಸಿಕೊಳ್ಳಲ ಹಣ ಅವಶ್ಯಕತೆ ಇದ್ದರಿಂದ ಆರೋಪಿಗಳು ಗಾಂಜಾ ಮಾರಾಟಕ್ಕೆ ಮುಂದಾಗಿದ್ದರು. ನಗರದ ಕೆ.ಆರ್.ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ ಎನ್ಡಿಪಿಎಸ್ ಹಾಗೂ ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಆಡುತ್ತಿದ್ದ ಮಕ್ಕಳ ಪ್ರಾಣ ತೆಗೆದ ಮರ, ಇಬ್ಬರು ಬಾಲಕರು ದುರ್ಮರಣ