ಬೆಂಗಳೂರು: ನೂತನ ವಿಧಾನಪರಿಷತ್ ಸದಸ್ಯರಾಗಿ ಬಿಜೆಪಿಯ ನಾಲ್ವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ, ಸಂವಿಧಾನದ ಪ್ರತಿ, ನಡಾವಳಿಯ ಪುಸ್ತಕವುಳ್ಳ ಸೂಟ್ಕೇಸ್ನ್ನ ನೀಡಿದರು. ದೇವರ ಹೆಸರಲ್ಲಿ ಎಂಎಲ್‌ಸಿ ಪ್ರತಾಪ್ ಸಿಂಹ ನಾಯಕ್, ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ ಪ್ರಮಾಣವಚನ ಸ್ವೀಕಾರ ಮಾಡಿದರು.
ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್, ಸಿಎಂ ಕೊಟ್ಟ ಮಾತಿನಂತೆ ಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ. ಮುಂದೆ ಸಚಿವ ಸ್ಥಾನ ನೀಡುವ ಭರವಸೆಯಿದೆ ಎಂದರು. ಹೆಚ್ ವಿಶ್ವನಾಥ್ ಅವರನ್ನು ಕೈಬಿಟ್ಟ ವಿಚಾರವಾಗಿ ಮಾತನಾಡಿದ ಅವರು, ಕಾರಣಾಂತರಗಳಿಂದ ಅವರ ಹೆಸರು ಬಿಟ್ಟು ಹೋಗಿದೆ. ಮುಂದಿನ ದಿನಗಳಲ್ಲಿ ಅವರಿಗೂ ಸ್ಥಾನ ಸಿಗುತ್ತದೆ. ನಾವು ಸಿಎಂ, ಹೈಕಮಾಂಡ್ಗೆ ಮನವಿ ಮಾಡುತ್ತೇವೆ ಎಂದರು.
ಪ್ರಮಾಣವಚನ ಸ್ವೀಕಾರ ಬಳಿಕ ಮಾತನಾಡಿದ ಆರ್.ಶಂಕರ್, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ಸಿಎಂ ಭರವಸೆ ನೀಡಿದ್ದು, ಸಚಿವ ಸ್ಥಾನ ಸಿಗುವ ಭರವಸೆಯಿದೆ ಎಂದರು.