ಬೆಂಗಳೂರು: ಭಾರತದ ಅತಿ ಎತ್ತರದ ಏಕಶಿಲಾ ಗಣಪನ ಮೂರ್ತಿ ಪ್ರತಿಷ್ಠಾಪನೆಗೆ ಅಡಿಗಲ್ಲು ಕಾರ್ಯಕ್ರಮ ಶುಕ್ರವಾರ ಬೆಂಗಳೂರಿನ ನಾಗವಾರದಲ್ಲಿ ನಡೆಯಿತು. ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ನಾಗವಾರ ಗ್ರಾಮದ ಶ್ರೀನಾಗಲಿಂಗ ಗಣಪತಿ ದೇವಸ್ಥಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಗಾತ್ರದ 42 ಅಡಿಯ ಏಕಶಿಲಾ ಗಣೇಶ ವಿಗ್ರಹದ ಅಡಿಗಲ್ಲು ಕಾರ್ಯಕ್ರಮಕ್ಕೆ ಶ್ರೀಸಿದ್ದಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿಯವರು ಚಾಲನೆ ನೀಡಿದರು.
ಮಹಾಬಲಿಪುರಂನ ಶಿಲ್ಪಿ ಅಂಬಿಕಾಪತಿ ನೇತೃತ್ವದಲ್ಲಿ ಗಣಪತಿಯ ಮೂರ್ತಿಯ ಕೆತ್ತನೆ ಕಾರ್ಯ ನಡೆದಿದ್ದು, ಗಣಪತಿ ವಿಗ್ರಹ ಅಂತಿಮ ರೂಪ ಪಡೆದುಕೊಳ್ಳುತ್ತಿದೆ. ಏಕಶಿಲಾ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ ಸಿದ್ದಗಂಗಾ ಸ್ವಾಮೀಜಿ ಅವರು ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು.
ಹಿಂದು ಧರ್ಮ ಹಾಗೂ ದೇವರು ಎನ್ನುವುದು ಆಚರಣೆಗೆ ಸೀಮಿತವಾಗದೆ ಅದೊಂದು ಜೀವನ ಪದ್ಧತಿಯಾಗಿದೆ ಎಂದು ಶ್ರೀಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀಸಿದ್ದಲಿಂಗ ಸ್ವಾಮೀಜಿ ಹೇಳಿದರು. ಹಿಂದು ಧರ್ಮದಲ್ಲಿನ ಆಚಾರ ವಿಚಾರಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿವೆ. ಹಿಂದು ಧರ್ಮದ ವಿಶಿಷ್ಟ ಪರಂಪರೆ ನಮ್ಮ ಮನೋ ವಿಕಾಸವನ್ನು ಮಹತ್ವದ ಕಡೆಗೆ ಕೊಂಡೊಯ್ಯಲು ಸಹಕಾರಿಯಾಗಿದೆ. ಭಕ್ತಿ ಪ್ರಧಾನವಾಗಿರುವ ದೇವರನ್ನು ಪೂಜಿಸಿದಾಗ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಹೇಳಿದರು.
ಶ್ರೀನಾಗಲಿಂಗ ಗಣಪತಿ ದೇವಸ್ಥಾನದ ಅಧ್ಯಕ್ಷ ಬಿ.ಗೋವಿಂದರಾಜು ಮಾತನಾಡಿ, ನಾಗವಾರ ಗ್ರಾಮಸ್ಥರ ಭಕ್ತರ ಬೇಡಿಕೆಯಂತೆ ಗಣೇಶನ ಏಕಶಿಲಾ ವಿಗ್ರಹಕ್ಕೆ ಅಡಿಗಲ್ಲು ಹಾಕಲಾಗಿದೆ. ಮೂವತ್ತು ವರ್ಷಗಳ ಸತತ ಪ್ರಯತ್ನದ ಫಲವಾಗಿ ದೇಶದಲ್ಲಿ ಅತಿ ಎತ್ತರದ ಏಕಶಿಲಾ ಗಣೇಶ ವಿಗ್ರಹ ಇದಾಗಿದ್ದು, ವಿಗ್ರಹವು 32 ಅಡಿ ಎತ್ತರ ಇರಲಿದೆ. ಒಂದು ವರ್ಷದೊಳಗೆ ಗಣೇಶ ವಿಗ್ರಹ ಉದ್ಘಾಟನೆಗೊಂಡು ಭಕ್ತರಿಗೆ ದರ್ಶನ ಸಿಗಲಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಡಿಎಸ್ ಮ್ಯಾಕ್ಸ್ ನಿರ್ದೇಶಕ ಡಾ.ಎಸ್.ಪಿ.ದಯಾನಂದ, ಪಟೇಲ್ ರಾಜಗೋಪಾಲ್, ವೆಂಕಟಾಚಲಪತಿ, ನರಸಿಂಹಮೂರ್ತಿ, ಮುನಿಸ್ವಾಮಿ, ಮುನಿರಾಜ್ ಕಾರ್ಣಿಕ್, ಗಣೇಶ್ ಗೋವಿಂದರಾಜು ಇದ್ದರು.
ಇದನ್ನೂ ಓದಿ: ರಾಯಭಾಗ, ಹುಬ್ಬಳ್ಳಿಯಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ.. ಎಂಇಎಸ್ ನಿಷೇಧಕ್ಕೆ ಆಗ್ರಹ!