ಬೆಂಗಳೂರು: ವೈದ್ಯೋ ನಾರಾಯಣ ಹರಿ ಅಂತಾರೆ. ಕೋವಿಡ್ ಸಮಯದಲ್ಲಿ ಆ ದೇವರು, ಸಂಬಂಧಿಕರು ಯಾರೂ ಸಹಾಯಕ್ಕೆ ಬರಲಿಲ್ಲ. ಆದರೆ, ವೈದ್ಯರು ಕುಟುಂಬವನ್ನೆಲ್ಲ ಬಿಟ್ಟು ಜನರ ಆರೈಕೆ ಮಾಡಿದರು. ನಾಳೆ ವೈದ್ಯರ ದಿನ. ಸಂಭ್ರಮಿಸಬೇಕಾದ ದಿನದಲ್ಲಿ ವೈದ್ಯರ ಮೇಲೆ ಹಲ್ಲೆಗಳಾಗುತ್ತಿರುವುದು ಬೇಸರದ ಸಂಗತಿ.
ಕಳೆದ ಕೆಲ ದಿನಗಳ ಹಿಂದೆ ನಗರದ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ಕ್ರಿಟಿಕಲ್ ಕೇರ್ ಮೆಡಿಸನ್ ವೈದ್ಯ ಡಾ.ಪದ್ಮಕುಮಾರ್ ಎ.ವಿ ಮೇಲೆ ರೋಗಿಯ ಕುಟುಂಬಸ್ಥರಿಂದ ಹಲ್ಲೆ ಮಾಡಲಾಗಿತ್ತು. ಈ ಕೋವಿಡ್ ಮಹಾಮಾರಿ ವಕ್ಕರಿಸಿದಾಗಿನಿಂದ ಒಂದು ದಿನವೂ ರಜೆ ಪಡೆಯದೇ ಜನರ ಸೇವೆ ಮಾಡಿದ್ದರ ಫಲವಾಗಿ ನನಗೆ ಸಿಕ್ಕಿದ್ದು ಹಲ್ಲೆ ಮಾತ್ರ ಎಂದು 'ಈಟಿವಿ ಭಾರತ'ದೊಂದಿಗೆ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
ಕೋವಿಡ್ ಪಾಸಿಟಿವ್ ಆಗಿದ್ದ ಇಳಿ ವಯಸ್ಸಿನ ವ್ಯಕ್ತಿಯನ್ನು ಅವರ ಕುಟುಂಬದವರು ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ದರು. ರೋಗಿ ಪಾಸಿಟಿವ್ ಜೊತೆಗೆ ಬಹು ಅಂಗಾಂಗ ವೈಫಲ್ಯ ಹಾಗೂ ಪಾರ್ಶ್ವವಾಯು ಸಮಸ್ಯೆಯಿಂದಲೂ ಬಳಲುತ್ತಿದ್ದರು. ಕೋವಿಡ್ ಪಾಸಿಟಿವ್ ಆದ ಬಳಿಕ ಈ ಎಲ್ಲಾ ಸಮಸ್ಯೆಗಳು ತೀವ್ರವಾದ್ದರಿಂದ ಅವರು ಬದುಕುವುದು ಕಷ್ಟವೆಂದು ಹೇಳಲಾಗಿತ್ತು. ಆದರೂ ಅವರ ಕುಟುಂಬದವರು ಬದುಕಿಸಲೇಬೇಕೆಂಬ ಹಠದ ಧೋರಣೆ ತೋರಿದ್ದರು. ಪ್ರಾರಂಭದಲ್ಲಿ ನಾವು ಅವರಿಗೆ ರೋಗಿಯ ಆರೋಗ್ಯದ ಸ್ಥಿತಿಯನ್ನು ಅರ್ಥ ಮಾಡಿಸಲು ಪ್ರಯತ್ನ ಪಟ್ಟೆವು. ಆದರೆ, ರೋಗಿಯ ಮಗ ಇದನ್ನು ಕೇಳಲು ತಾಳ್ಮೆಯೇ ವಹಿಸುತ್ತಿರಲಿಲ್ಲ. ನಾವು ಸಾಧ್ಯವಾದಷ್ಟು ಪ್ರಯತ್ನ ಪಡುವುದಾಗಿಯೂ ಭರವಸೆ ನೀಡಿದ್ದೆವು.
ಆದರೆ, ಅವರ ಮಗ ಮಾತ್ರ ಅದನ್ನು ಪೂರ್ತಿ ಕೇಳದೇ ಏಕಾಏಕಿ ನನ್ನ ಮೇಲೆ ಹಾಗೂ ಡ್ಯೂಟಿಯಲ್ಲಿದ್ದ ನರ್ಸ್ ಮೇಲೆ ಹಲ್ಲೆ ಮಾಡಿದರು. ನನ್ನ ತಲೆಗೆ ತೀವ್ರವಾದ ಗಾಯವಾಗಿ ರಕ್ತಸ್ರಾವವಾಯಿತು. ಕೋವಿಡ್ ಸೋಂಕು ಬಂದ ದಿನದಿಂದ ಈವರೆಗೂ ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡುತ್ತಿದ್ದ ನನ್ನ ಮನಸ್ಸಿಗೆ ಇದು ಹೆಚ್ಚು ಘಾಸಿ ಮಾಡಿತು. 30 ವರ್ಷದ ನನ್ನ ವೃತ್ತಿ ಬದುಕಿನಲ್ಲಿ ಇಂಥ ಘಟನೆ ಇದೇ ಮೊದಲ ಬಾರಿಗೆ ನಡೆದಿತ್ತು. ನನ್ನ ಕುಟುಂಬಸ್ಥರು ಹೆಚ್ಚು ಭಯಭೀತರಾಗಿ ಕೆಲಸ ಬಿಡುವಂತೆಯೂ ಹೇಳಿದರು.
ಬೇಸರದ ಸಂಗತಿ ಎಂದರೆ ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಜೈಲಿಗೆ ಕಳುಹಿಸಿದರೂ ಮಾರನೇ ದಿನವೇ ಬೇಲ್ ಮೇಲೆ ಹೊರಗೆ ಬಂದರು. ಇದು ನಿಜಕ್ಕೂ ವೈದ್ಯ ಕ್ಷೇತ್ರಕ್ಕೆ ಕೆಟ್ಟ ಸಂದೇಶವಾಗಲಿದೆ. ಬೇಲ್ ರಹಿತ ಪ್ರಕರಣವಾದರೂ ಆರೋಪಿ ಹೊರಗೆ ಬರಬಹುದು ಎಂದಾದರೆ ವೈದ್ಯರಿಗೆ ರಕ್ಷಣೆ ಯಾರು ಕೊಡಲು ಸಾಧ್ಯ ಎಂದು ಡಾ. ಪದ್ಮಕುಮಾರ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಈಗಿರುವ ಕಾನೂನನ್ನು ಬಲಗೊಳಿಸಬೇಕು. ವೈದ್ಯರ ಮೇಲೆ ಹಲ್ಲೆ ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು. ವೈದ್ಯರಾದ ಯಾರೂ ಸಹ ತಮ್ಮ ವೃತ್ತಿ ಬದುಕಿಗೆ ಮೋಸ ಮಾಡಿ, ರೋಗಿಯ ಜೀವನದ ಜೊತೆ ಆಟವಾಡುವುದಿಲ್ಲ. ಆದರೆ, ಬದುಕಿಸಲು ಅಸಾಧ್ಯವಾದರೆ ವೈದ್ಯನೂ ಸಹ ಅಸಹಾಯಕನೆ. ಅದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಗೊಂದಲ ವಿಚಾರ: 'ಕೈ' ನಾಯಕರಿಂದ ಮೌನವೇ ಉತ್ತರ