ಬೆಳಗಾವಿ : 'ಅತ್ಯಾಚಾರ ತಡೆಯಲಾಗದಿದ್ರೆ ಮಲಗಿ ಆನಂದಿಸಬೇಕು..' ಎಂದು ಚರ್ಚೆಯ ವಿಷಯವೊಂದಕ್ಕೆ ಸಂಬಂಧಿಸಿದಂತೆ ಸಂದರ್ಭೋಚಿತವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ನಿನ್ನೆ ನೀಡಿದ್ದ ಹೇಳಿಕೆಗೆ ಇವತ್ತು ಸದನದಲ್ಲಿಯೇ ಕ್ಷಮೆ ಕೋರಿದ್ದಾರೆ.
ತಮ್ಮ ಮಾತಿನಿಂದ ವಿವಾದ ಏರ್ಪಟ್ಟಿದೆ ಅನ್ನೋದನ್ನ ಅರಿತ ಮಾಜಿ ಸಚಿವ ರಮೇಶ್ ಕುಮಾರ್ ಇಂದು ಸದನ ಆರಂಭವಾಗ್ತಿದ್ದಂತೆಯೇ ತಮ್ಮ ಹೇಳಿಕೆಗೆ ವಿಷಾದಿಸಿದ್ದಾರೆ. ತಮ್ಮ ಮಾತಿನಿಂದ ಹೆಣ್ಣು ಮಕ್ಕಳಿಗೆ ನೋವಾಗಿದ್ರೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವೆ ಎಂದಿದ್ದಾರೆ.
ಅಕಾಲಿಕ ಮಳೆಯಿಂದ ಆದ ಹಾನಿ ಹಾಗೂ ಪರಿಹಾರ ಕುರಿತು ನಿಯಮ 69ರ ಅಡಿ ನಡೆಯುತ್ತಿದ್ದ ಚರ್ಚೆಗೆ ಹೆಚ್ಚಿನ ಸಮಯ ನೀಡಬೇಕು. ಸದನದಲ್ಲಿ ಮಾತನಾಡಲು ನಮಗೂ ಅವಕಾಶ ಕೊಡಬೇಕು ಎಂದು ಶಾಸಕರೆಲ್ಲ ನಿನ್ನೆ ಪಟ್ಟು ಹಿಡಿದಿದ್ದರು.
ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಎಲ್ಲರೂ ಮಾತನಾಡಬೇಕು ಎಂದರೆ ಹೇಗೆ? ನಾನು ಗಮನ ಸೆಳೆಯುವ ಸೂಚನೆಗಳನ್ನು ಮಂಡಿಸಬೇಕಿದೆ ಎಂದರು. ಆಗ ಕೆಲ ಸದಸ್ಯರು ಎದ್ದು ನಿಂತು ಮಾತನಾಡಲು ನಮಗೂ ಅವಕಾಶ ಕೊಡಬೇಕು ಎಂದರು.
ಎಲ್ಲರೂ ಮಾತನಾಡಿದರೆ ಗಮನ ಸೆಳೆಯುವ ಸೂಚನೆ ಮಂಡಿಸಲು ಆಗುವುದಿಲ್ಲ. ಗಮನ ಸೆಳೆಯುವ ಸೂಚನೆ ಮಂಡಿಸುವುದು ಬೇಡ ಎನ್ನುವುದಾದರೆ ತಾವೆಲ್ಲರೂ ಮಾತನಾಡಬಹುದು ಎಂದರು. ಅದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದಾಗ ಕೆಲ ಸದಸ್ಯರು ನಾನು ಮಾತನಾಡಬೇಕು, ನಾನು ಮಾತನಾಡಬೇಕು ಎಂದು ಪಟ್ಟು ಹಿಡಿದರು.
ಓದಿ: ‘‘ಅತ್ಯಾಚಾರ ತಡೆಯಲಾಗದಿದ್ರೆ.... ?’’: ರಮೇಶ್ ಕುಮಾರ್ ಸಾಂದರ್ಭಿಕ ಹೇಳಿಕೆ ಹಿಂದಿನ ಮರ್ಮವೇನು?
ನನ್ನದೇನು ಅಭ್ಯಂತರ ಇಲ್ಲ, ನೀವೆಲ್ಲರೂ ಮಾತನಾಡಬಹುದು. 'ರಮೇಶ್ ಕುಮಾರ್ ಅವರೇ ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ಲೆಟ್ಸ್ ಎಂಜಾಯ್‌ದ ಸಿಚುವೇಷನ್ ಅನ್ನೋ ರೀತಿಯಲ್ಲಿದೆ. ಸದನ ನಿಯಂತ್ರಿಸುವುದೇ ಕಷ್ಟವಾಗಿದೆ' ಎಂದರು.
ಸ್ಪೀಕರ್ ಹೆಸರು ಉಲ್ಲೇಖಿಸುತ್ತಿದ್ದಂತೆ ಎದ್ದು ನಿಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಒಂದು ಮಾತಿದೆ, ವೆನ್ ರೇಪ್ ಈಸ್ ಇನ್‌ಎವಿಟೇಬಲ್, ಲೈ ಬ್ಯಾಕ್ ಅಂಡ್ ಎಂಜಾಯ್ ಇಟ್('When rape is inevitable, lie back and enjoy it) ಎಂದರು. ಆಗ ಮುಗುಳ್ನಗೆ ಬೀರಿದ ಸ್ಪೀಕರ್ ಹೆಗಡೆ, ಚರ್ಚೆ ಆರಂಭಿಸುವಂತೆ ಸದಸ್ಯರಿಗೆ ತಿಳಿಸಿದರು. ನಿನ್ನೆ ಸದನದಲ್ಲಿ ಆಡಿದ ಈ ಮಾತು ರಾಜ್ಯವಲ್ಲದೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹಾಗಾಗಿ, ಇಂದು ಕಲಾಪ ಆರಂಭವಾಗುತ್ತಿದ್ದಂತೆ ರಮೇಶ್ ಕುಮಾರ್ ಇದರ ಬಗ್ಗೆ ಸ್ಪಷ್ಟಿಕರಣ ನೀಡಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದ್ರೂ ನೋವಾಗಿದ್ರೂ ವಿಷಾಧಿಸುತ್ತೇನೆ.
ದೇಶದ ಮಹಿಳೆಯರಿಗೆ ನನ್ನ ಹೇಳಿಕೆಯಿಂದ ನೋವಾಗಿದ್ರೆ ವಿಷಾಧಿಸುತ್ತೇನೆ. ಲಘುವಾಗಿ ವರ್ತಿಸಬೇಕೆಂಬ ಉದ್ದೇಶ ನನಗಿಲ್ಲ. ಹೀಗಾಗಿ, ನನ್ನ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ ಎಂದು ವಿಧಾನಸಭೆ ಕಲಾಪದಲ್ಲಿ ರಮೇಶ್ ಕುಮಾರ್ ಹೇಳಿದ್ದಾರೆ.